ವಾಲ್ಮೀಕಿ ನಿಗಮದ ಹಗರಣದಲ್ಲಿ SIT ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ವಾಲ್ಮೀಕಿ ನಿಗಮದ ಎಂಡಿ ಆಗಿದ್ದ ಪದ್ಮನಾಭ ಹಾಗೂ ಅಕೌಂಟೆಂಟ್ ಪರಶುರಾಮ್ ಬಂಧನಕ್ಕೊಳಗಾದ ಅಧಿಕಾರಿಗಳಾಗಿದ್ದಾರೆ. ಹಗರಣ ಬಯಲಾಗುತ್ತಿದ್ದಂತೆ ವಾಲ್ಮೀಕಿ ನಿಗಮದ ಎಂಡಿ ಅವರನ್ನು ಅಮಾನತು ಮಾಡಲಾಗಿತ್ತು, ಸದ್ಯ ಸರ್ಕಾರ SIT ರಚನೆ ಮಾಡಿದ ಬೆನ್ನಲ್ಲೇ ಇದೀಗ ಎಂಡಿ ಪರಶುರಾಮ್ ಅವರನ್ನು ಬಂಧಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ವಾಲ್ಮೀಕಿ ನಿಗಮದ ಅಧಿಕೃತ ಬ್ಯಾಂಕ್ ಖಾತೆಯನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಸಂತನಗರ ಶಾಖೆಯಿಂದ ಎಂ.ಜಿ.ರಸ್ತೆಯ ಶಾಖೆಗೆ ವರ್ಗಾಯಿಸಲಾಗಿತ್ತು.

ಈ ಖಾತೆಗೆ ವಿವಿಧ ಬ್ಯಾಂಕ್ ಗಳು ಮತ್ತು ಕೆ-2 ಖಾತೆಗಳಿಂದ ಸರಕಾರಿ ಯೋಜನೆಗಳ ವಿವಿಧ ಪ್ರಮಾಣದ ಮೊತ್ತವು ಒಂದು ತಿಂಗಳ ಅವಧಿಯಲ್ಲಿ ಒಟ್ಟು 187.33 ಕೋಟಿ ರೂಪಾಯಿಗಳು ವರ್ಗಾವಣೆಯಾಗಿದೆ. ಬ್ಯಾಂಕ್ ಖಾತೆಯಲ್ಲಿ ಹಣ ಇದೆಯೇ ಇಲ್ಲವೇ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಈ ಮಧ್ಯೆ ಆರ್ಥಿಕ ವರ್ಷದ ಕೊನೆ ಬಂದಿದ್ದರಿಂದ ಸರಕಾರದ ವಿವಿಧ ಯೋಜನೆಗಳ 187.33 ಕೋಟಿ ರೂಪಾಯಿಗಳನ್ನು ಲಪಟಾಯಿಸಲು ಸಂಚು ಸಿದ್ಧಗೊಂಡಿತ್ತು ಎನ್ನಲಾಗಿದೆ. ನಿಗಮದ ಅಧಿಕಾರಿಗಳ ಪ್ರಕಾರ, ಈ ವಿಚಾರ ಅವರಿಗೆ ಗೊತ್ತಿಲ್ಲವಂತೆ. ಆದರೆ ಆರ್ಥಿಕ ವರ್ಷದ ಕೊನೆಯ ದಿನವಾದ ಮಾರ್ಚ್ 31 ರಂದು ವಾಲ್ಮೀಕಿ ನಿಗಮದ ಆಡಳಿತ ಮಂಡಳಿ ಸಭೆ (ಬೋರ್ಡ್ ಮೀಟಿಂಗ್) ನಡೆಸಿ 187.33 ಕೋಟಿ ರೂ.ಗಳ ಪೈಕಿ 50 ಕೋಟಿ ರೂ.ಗಳನ್ನು 13 ತಿಂಗಳ ಅವಧಿಗೆ ಠೇವಣಿ ಇಡುವ ಠರಾವು ಮಾಡಲಾಯಿತು. ಆ ಠೇವಣಿ ಮೊತ್ತದ ಗ್ಯಾರಂಟಿ ಆಧಾರದ ಮೇಲೆ 45 ಕೋಟಿ ರೂ. ಗಳನ್ನು ಅದೇ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಅದೇ ದಿನ 9 ಫಲಾನುಭವಿಗಳು ಹೈದರಾಬಾದ್ ನ ರತ್ನಾಕರ ಬ್ಯಾಂಕ್ ನಲ್ಲಿ ಖಾತೆ ತೆರೆದರು. ಹೆಸರಿಗೆ 9 ಖಾತೆಗಳನ್ನು ತೆರೆದದ್ದು ದೇಶದ ಪ್ರತಿಷ್ಠಿತ ಕಂಪನಿಗಳೇ ಆದರೂ ವಾಸ್ತವವಾಗಿ ಆ ಕಂಪನಿಗಳ ಹೆಸರಲ್ಲಿ ನಕಲಿ ವ್ಯಕ್ತಿಗಳು ಖಾತೆ ತೆರೆದಿದ್ದಾರಂತೆ. ಶುಕ್ರವಾರ ರಾತ್ರಿ ಪದ್ಮನಾಭ್ ಮತ್ತು ಪರಶುರಾಮ್ ನನ್ನು SIT ಬಂಧಿಸಿದ್ದು ಶನಿವಾರ ಮಧ್ಯಾಹ್ನದ ಬಳಿಕ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗುತ್ತದೆ.
ಇದನ್ನೂ ಓದಿ : – BIGG BOSS OTT 3 – ಸಲ್ಮಾನ್ ಖಾನ್ ಬದಲು ಅನಿಲ್ ಕಪೂರ್ ಹೋಸ್ಟ್