ಇದರ ಜೊತೆಗೆ, ಈ ಸಂಕೀರ್ಣ ಶಸ್ತ್ರಚಿಕಿತ್ಸೆಗಳಿಗಾಗಿ ಪ್ರಸ್ತುತ ಇರುವ ವಾರ್ಷಿಕ ₹5 ಲಕ್ಷದ ಚಿಕಿತ್ಸಾ ಮಿತಿಯನ್ನು ₹10 ಲಕ್ಷಕ್ಕೆ ಹೆಚ್ಚಿಸುವ ಚಿಂತನೆಯೂ ಸರ್ಕಾರದ ಮುಂದಿದೆ.
ಈ ಮಹತ್ವದ ಯೋಜನೆಯ ಅನುಷ್ಠಾನ, ಪ್ಯಾಕೇಜ್ ದರ ಹಾಗೂ ಒಟ್ಟಾರೆ ಪ್ರಕ್ರಿಯೆಗಳನ್ನು ರೂಪಿಸಲು ಏಮ್ಸ್ (AIIMS) ಸೇರಿದಂತೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಪರಿಣಿತ ವೈದ್ಯರನ್ನೊಳಗೊಂಡ ವಿಶೇಷ ಸಮಿತಿಯನ್ನು ರಚಿಸಲಾಗಿದೆ.
ಸಮಗ್ರ ಚಿಕಿತ್ಸಾ ಪ್ಯಾಕೇಜ್ ರೂಪಿಸುತ್ತಿರುವ ತಜ್ಞರ ಸಮಿತಿ
ಶಸ್ತ್ರಚಿಕಿತ್ಸೆಯ ವೆಚ್ಚ ಮಾತ್ರವಲ್ಲದೆ, ಆಪರೇಷನ್‌ಗೂ ಮುನ್ನ ಮತ್ತು ನಂತರದ ತಪಾಸಣೆಗಳು, ಐಸಿಯು (ICU) ವೆಚ್ಚ, ಅಗತ್ಯ ಔಷಧಿಗಳು ಹಾಗೂ ನಂತರದ ನಿರಂತರ ಆರೈಕೆಯ ಸಂಪೂರ್ಣ ವೆಚ್ಚವನ್ನು ಈ ಸಮಿತಿಯು ಅಧ್ಯಯನ ನಡೆಸುತ್ತಿದೆ. ಮಧ್ಯಪ್ರದೇಶ ಆಯುಷ್ಮಾನ್ ಭಾರತ್ ಯೋಜನೆಯ ಸಿಇಒ ಅರವಿಂದ್ ಶಾ ಅವರ ಪ್ರಕಾರ, ತಜ್ಞರ ಸಮಿತಿಯ ವರದಿ ಪೂರ್ಣಗೊಂಡ ಬಳಿಕ ಹೊಸ ಪ್ಯಾಕೇಜ್ ದರ ಮತ್ತು ಚಿಕಿತ್ಸಾ ಮಿತಿಯ ಅಂತಿಮ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.ರಾಜ್ಯದಲ್ಲಿ ಅಂಗಾಂಗ ಕಸಿ ಹೆಚ್ಚಿಸಲು ಸರ್ಕಾರದ ಹೆಜ್ಜೆ
ಮಧ್ಯಪ್ರದೇಶದಲ್ಲಿ ಅಂಗಾಂಗ ಕಸಿ ಪ್ರಮಾಣ ತೀರಾ ಕಡಿಮೆಯಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ 2025 ರಲ್ಲಿ ದೇಶಾದ್ಯಂತ ಸುಮಾರು 20,000 ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿದ್ದರೂ, ಮಧ್ಯಪ್ರದೇಶದ ಪಾಲು ಕೇವಲ ಶೇಕಡಾ 2 ರಷ್ಟಿತ್ತು. ಅಲ್ಲದೆ, ಜನವರಿಯಿಂದ ಆಗಸ್ಟ್ 2025ರ ಅವಧಿಯಲ್ಲಿ ರಾಜ್ಯದಲ್ಲಿ ಕೇವಲ 13 ಬ್ರೈನ್ ಡೆಡ್ (ಅಂಗಾಂಗ ದಾನ) ಪ್ರಕರಣಗಳು ದಾಖಲಾಗಿದ್ದವು. ಇದನ್ನು ಸುಧಾರಿಸಲು ಏಮ್ಸ್ ಭೋಪಾಲ್ ಮೂಲಕ ಸರ್ಕಾರಿ ವೈದ್ಯಕೀಯ ಕಾಲೇಜುಗಳ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಬ್ರೈನ್ ಡೆಡ್ ದೃಢೀಕರಣ, ಕುಟುಂಬಸ್ಥರ ಕೌನ್ಸೆಲಿಂಗ್, ಅಂಗಾಂಗ ಸಂರಕ್ಷಣೆ ಮತ್ತು ‘ಗ್ರೀನ್ ಕಾರಿಡಾರ್’ ನಿರ್ವಹಣೆಯ ಕುರಿತು ವಿಶೇಷ ತರಬೇತಿ ನೀಡಲಾಗುತ್ತಿದೆ.
ಅಂಗಾಂಗ ಕಸಿ ವೆಚ್ಚ ಎಷ್ಟು ದುಬಾರಿ?
ಪ್ರಸ್ತುತ ಖಾಸಗಿ ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿ ಸಾಮಾನ್ಯ ಜನರಿಗೆ ಗಗನಕುಸುಮವಾಗಿದೆ:
ಶ್ವಾಸಕೋಶ ಕಸಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ₹10 ರಿಂದ ₹15 ಲಕ್ಷ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ₹60 ರಿಂದ ₹70 ಲಕ್ಷದಷ್ಟು ಭಾರೀ ವೆಚ್ಚ ತಗುಲುತ್ತದೆ.
ಕಿಡ್ನಿ ಕಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ₹3 ರಿಂದ ₹5.5 ಲಕ್ಷ ವೆಚ್ಚವಾದರೆ, ಖಾಸಗಿ ಆಸ್ಪತ್ರೆಗಳಲ್ಲಿ ₹15 ರಿಂದ ₹20 ಲಕ್ಷ ತಗಲುತ್ತದೆ.
ಲಿವರ್ ಕಸಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ₹8 ರಿಂದ ₹12 ಲಕ್ಷ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ₹30 ರಿಂದ ₹35 ಲಕ್ಷ ವೆಚ್ಚವಾಗುತ್ತದೆ.
ಹೃದಯ ಕಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು ₹10 ಲಕ್ಷವಾದರೆ, ಖಾಸಗಿಯಲ್ಲಿ ₹40 ರಿಂದ ₹50 ಲಕ್ಷದವರೆಗೂ ತಗಲುತ್ತದೆ. ಕ್ಯಾನ್ಸರ್ ಚಿಕಿತ್ಸೆಗೂ ಸಮಗ್ರ ಕವರೇಜ್‌ಗೆ ತಜ್ಞರ ಆಗ್ರಹ
ಇದೇ ವೇಳೆ, ಕ್ಯಾನ್ಸರ್ ರೋಗಿಗಳ ಚಿಕಿತ್ಸಾ ಪ್ಯಾಕೇಜ್‌ಗಳನ್ನು ವಿಸ್ತರಿಸುವಂತೆ ತಜ್ಞರು ಒತ್ತಾಯಿಸಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಯು ಕೇವಲ ಕೀಮೋಥೆರಪಿ ಅಥವಾ ರೇಡಿಯೇಷನ್‌ಗೆ ಸೀಮಿತವಾಗಿರದೇ ತಿಂಗಳುಗಟ್ಟಲೆ ನಡೆಯುವುದರಿಂದ, ಹಂತ ಹಂತದ ಅನುಮೋದನೆಗಳ ಬದಲಾಗಿ ಪ್ರಾಥಮಿಕ ತಪಾಸಣೆಯಿಂದ ಹಿಡಿದು ಇಮ್ಯುನೊಥೆರಪಿ ಮತ್ತು ನಂತರದ ಆರೈಕೆಯವರೆಗೂ ಸಮಗ್ರ ಏಕರೂಪದ ಕವರೇಜ್ ಒದಗಿಸಬೇಕು ಎಂದು ಮಾಜಿ ಎನ್‌ಹೆಚ್‌ಎಂ ನಿರ್ದೇಶಕ ಡಾ. ಪಂಕಜ್ ಶುಕ್ಲಾ ಅಭಿಪ್ರಾಯಪಟ್ಟಿದ್ದಾರೆ. ಜುಲೈ 2026ರವರೆಗೆ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ (PM-JAY) 27 ವೈದ್ಯಕೀಯ ವಿಭಾಗಗಳಲ್ಲಿ ಒಟ್ಟು 1,961 ಚಿಕಿತ್ಸಾ ವಿಧಾನಗಳು ಲಭ್ಯವಿವೆ.