ನಕಲಿ ಅಂಗವಿಕಲತೆ ಪ್ರಮಾಣ ಪತ್ರ ಮಾಡಿಕೊಟ್ಟವರ ವಿರುದ್ದ ಕಠಿಣ ಕ್ರಮ

ನಕಲಿ ಅಂಗವಿಕಲತೆ ಪ್ರಮಾಣ ಪತ್ರ ತಡೆಗೆ ಕಠಿಣ ಕ್ರಮ: ನೇಮಕಾತಿಗೂ ಮುನ್ನ ಆಧುನಿಕ ವೈದ್ಯಕೀಯ ತಪಾಸಣೆ ಕಡ್ಡಾಯಗೊಳಿಸಿ ರಾಜ್ಯ ಆಯುಕ್ತರ ಆದೇಶ  

ಬೆಂಗಳೂರು:  ನಕಲಿ ಅಂಗವಿಕಲತೆ ಪ್ರಮಾಣ ಪತ್ರಗಳನ್ನು(Fake Disability Certificate)
ಬಳಸಿಕೊಂಡು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವ ಅಕ್ರಮಗಳಿಗೆ ಕಡಿವಾಣ ಹಾಕಲು ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿದೆ.

ಮುಂದಿನ ಎಲ್ಲಾ ನೇಮಕಾತಿ ಪ್ರಕ್ರಿಯೆಗಳಲ್ಲಿ ವಿಕಲಚೇತನ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಮುನ್ನ ಆಧುನಿಕ ಉಪಕರಣಗಳನ್ನು ಹೊಂದಿರುವ ಅಧಿಕೃತ ವೈದ್ಯಕೀಯ ಮಂಡಳಿಗಳಲ್ಲಿ ತಪಾಸಣೆಗೆ ಒಳಪಡಿಸಿ, ಅಂಗವಿಕಲತೆಯ ನೈಜ ವರದಿಯನ್ನು ದೃಢೀಕರಿಸಿಕೊಂಡ ನಂತರವೇ ನೇಮಕಾತಿ ಆದೇಶ ನೀಡಬೇಕೆಂದು ರಾಜ್ಯದ ಎಲ್ಲಾ ನೇಮಕಾತಿ ಪ್ರಾಧಿಕಾರಗಳು ಹಾಗೂ ಇಲಾಖೆಗಳಿಗೆ ಸ್ಪಷ್ಟ ಆದೇಶ ನೀಡಲಾಗಿದೆ.

ಕಲಬುರಗಿ ಜಿಲ್ಲೆಯ ತಾರಫೈಲ್ ತಾಲೂಕಿನ ಅರ್ಚನಾ ನಿವಾಸದ ಶ್ರಿ ಅಂಬಾಜಿ ಪಿ ಮೇಟೆ (ವಿಕಲಚೇತನರು, ಸಂಸ್ಥಾಪಕ ಅಧ್ಯಕ್ಷರು) ಎಂಬುವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಬೀದರ್ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಶ್ರೀ ಮಲ್ಲಿಕಾರ್ಜುನ (ಪ್ರತಿವಾದಿ-1) ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗ್ರೇಡ್-1 ತಹಶೀಲ್ದಾರ್ ಶ್ರೀಮತಿ ನಾಗಮ್ಮ (ಪ್ರತಿವಾದಿ-2) ಅವರು ನಕಲಿ ಅಂಗವಿಕಲ ಪ್ರಮಾಣ ಪತ್ರದ ಆಧಾರದ ಮೇಲೆ ನೇಮಕಾತಿ ಹೊಂದಿದ್ದಾರೆ ಎಂದು ದೂರು ಸಲ್ಲಿಸಲಾಗಿತ್ತು. ಪ್ರಮಾಣ ಪತ್ರದ ನೈಜತೆಯ ಕುರಿತು ವೈದ್ಯಕೀಯ ಮರು ಪರಿಶೀಲನೆ ನಡೆಸಲು ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಅಂತಿಮ ಆದೇಶ ಹೊರಡಿಸಿದೆ.

ಆದೇಶದ ಪ್ರಮುಖ ಮುಖ್ಯಾಂಶಗಳು:  

ಮರು ತಪಾಸಣೆಗೆ ಆದೇಶ: ಪ್ರತಿವಾದಿ 1 ಮತ್ತು 2 ರವರ ಅಂಗವಿಕಲತೆಯ ನೈಜತೆಯನ್ನು ಮರು ಪರಿಶೀಲಿಸುವ ಅಧಿಕಾರ ನೇಮಕಾತಿ ಪ್ರಾಧಿಕಾರದ್ದಾಗಿದ್ದು, ಸುಸಜ್ಜಿತ ಹಾಗೂ ಆಧುನಿಕ ಉಪಕರಣಗಳನ್ನು ಹೊಂದಿರುವ ಅಧಿಕೃತ ವೈದ್ಯಕೀಯ ಮಂಡಳಿಗಳಲ್ಲಿ ಮರು ತಪಾಸಣೆಗೆ ಒಳಪಡಿಸಬೇಕು.

ಸೂಕ್ತ ಕ್ರಮಕ್ಕೆ ಸೂಚನೆ: ನೈಜ ವೈದ್ಯಕೀಯ ವರದಿಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರು ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ.

ಮುಂದಿನ ನೇಮಕಾತಿಗಳಿಗೆ ಕಡ್ಡಾಯ: ನಕಲಿ ಪ್ರಮಾಣ ಪತ್ರಗಳ ಮೂಲಕ ಉದ್ಯೋಗ ಪಡೆಯುತ್ತಿರುವ ಕುರಿತು ದೂರುಗಳು ಮತ್ತು ಮಾಧ್ಯಮಗಳಲ್ಲಿ ವರದಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇನ್ಮುಂದೆ ಪ್ರತಿಯೊಂದು ನೇಮಕಾತಿ ಪ್ರಕ್ರಿಯೆಯಲ್ಲೂ ನೇಮಕಾತಿ ಆದೇಶ ನೀಡುವ ಮುಂಚೆಯೇ ಅಧಿಕೃತ ವೈದ್ಯಕೀಯ ಮಂಡಳಿಯಿಂದ ದೃಢೀಕರಣ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ನಿಜವಾದ ಅಂಗವಿಕಲ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸಲು ಹಾಗೂ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಅಡಿಯಲ್ಲಿ ಸಿಗುವ ಶಾಸನಬದ್ಧ ಮೀಸಲಾತಿ ಮತ್ತು ಸೌಲಭ್ಯಗಳ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ನ್ಯಾಯಾಲಯದ ರಾಜ್ಯ ಆಯುಕ್ತರಾದ ಡಾ. ಮಹೇಶ್ ಬಾಬು. ಎನ್. ಕೆ.ಎ.ಎಸ್ ರವರು  ಆದೇಶವನ್ನು ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *