ತಮಿಳುನಾಡಿನ ಕಲ್ಲುಕುರಿಚಿ ಜಿಲ್ಲೆಯ ಕರುಣಾಪುರಂನಲ್ಲಿ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿರುವವರ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ. ನಕಲಿ ಮದ್ಯ ಸೇವನೆಯಿಂದ 20 ಮಂದಿ ಅಸ್ವಸ್ಥರಾಗಿದ್ದು, ಈ ಪೈಕಿ 7 ಜನರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಕಳವಳ ವ್ಯಕ್ತವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕೆ.ಕಣ್ಣಾಕುಟ್ಟಿ(49) ಎಂಬುವರನ್ನು ಬಂಧಿಸಲಾಗಿದ್ದು, 200 ಲೀ. ನಕಲಿ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ ಕರುಣಾಪುರಂನ ಕಾರ್ಮಿಕರ ಗುಂಪು ಮಂಗಳವಾರ ರಾತ್ರಿ ಅಕ್ರಮ ಮಾರಾಟಗಾರರಿಂದ ಮದ್ಯವನ್ನು ಖರೀದಿಸಿದೆ. ಮನೆಗೆ ಹಿಂದಿರುಗಿದ ನಂತರ ತಲೆನೋವು, ವಾಂತಿ, ತಲೆತಿರುಗುವಿಕೆ, ಹೊಟ್ಟೆ ನೋವು, ದಿಗ್ಭ್ರಮೆ ಮತ್ತು ಕಣ್ಣಿನ ಅಸ್ವಸ್ಥತೆ ಸೇರಿದಂತೆ ತೀವ್ರ ರೋಗಲಕ್ಷಣಗಳು ಕಂಡುಬಂದಿವೆ.

ಪ್ರಕರಣ ಸಿಐಡಿ ತನಿಖೆಗೆ :
ನಕಲಿ ಮದ್ಯ ದುರಂತಕ್ಕೆ ಮುಖ್ಯಮಂತ್ರಿ ಸ್ಟಾಲಿನ್ ಆಘಾತ ವ್ಯಕ್ತಪಡಿಸಿ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಪ್ರಕರಣ ಕುರಿತು ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ಕಲ್ಲುಕುರಿಚಿ ದುರಂತ ತೀವ್ರ ಆಘಾತ ಉಂಟುಮಾಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 9 ಪೊಲೀಸ್ ಸಿಬ್ಬಂದಿಯನ್ನೂ ಕೂಡ ಅಮಾನತು ಮಾಡಲಾಗಿದೆ.