25 ಅಡಿ ಎತ್ತರ ಇರುವ ಕಂಚಿನ ಭುವನೇಶ್ವರಿ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಇಂದು ವಿಧಾನಸೌಧದ ಆವರಣದಲ್ಲಿ ಗುದ್ದಲಿ ಪೂಜೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ , ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಉಪಸ್ಥಿತರಿದ್ದರು. ವಿಧಾನಸೌಧದ ಪಶ್ಚಿಮ ದ್ವಾರದ ಮಧ್ಯ ಭಾಗದಲ್ಲಿ ನಿರ್ಮಾಣ ಆಗಲಿರುವ ಭುವನೇಶ್ವರಿ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.

ಇದೇ ವೇಳೆ ಕನ್ನಡ ಭಾಷೆ, ನೆಲ, ಜಲವನ್ನು ಸಂರಕ್ಷಣೆ ಮಾಡಿಕೊಂಡು ಹೋಗುವ ಕೆಲಸ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಾಡದೇವಿ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿದ ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಮಾತೃಭಾಷೆಯಲ್ಲಿ ಮಾತನಾಡುವುದು ಹೆಮ್ಮೆಯ ಸಂಗತಿಯಾಗಬೇಕು. ಪ್ರತಿಯೊಬ್ಬರೂ ಕೂಡ ಕರ್ನಾಟಕದಲ್ಲಿ ಬಾಳಿ ಬದುಕುವವರೊಂದಿಗೆ ಕನ್ನಡದಲ್ಲಿಯೇ ಮಾತನಾಡುತ್ತೇನೆ. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ ಎಂದು ತೀರ್ಮಾನ ಮಾಡಬೇಕು. ಕನ್ನಡಿಗರು ಉದಾರಿಗಳು. ಹಾಗಾಗಿಯೇ ಬೇರೆ ಭಾಷೆ ಮಾತನಾಡುವವರೂ ಕೂಡ ಕನ್ನಡ ಕಲಿಯದೆ ಬದುಕುವ ವಾತಾವರಣ ಕರ್ಣಾಟಕದಲ್ಲಿದೆ. ತಮಿಳುನಾಡು, ಆಂಧ್ರ, ಕೇರಳಕ್ಕೆ ಹೋದರೆ ಅವರ ಮಾತೃಭಾಷೆಯಲ್ಲಿಯೇ ಮಾತನಾಡುತ್ತಾರೆ. ನಾವೂ ಕೂಡ ನಮ್ಮ ಮಾತೃಭಾಷೆಯಲ್ಲಿಯೇ ವ್ಯವಹರಿಸಬೇಕು. ಅದು ನಮಗೆ ಹೆಮ್ಮೆಯ ವಿಷಯ ಹೊರತು ಕೀಳರಿಮೆ ಅಗತ್ಯವಿಲ್ಲ ಎಂದರು ತಿಳಿಸಿದರು.

ಕರ್ನಾಟಕದಲ್ಲಿ ವಾಸ ಮಾಡುವವರು ಕನ್ನಡ ಕಲಿಯಬೇಕು. ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿ ಇಲ್ಲಿ ವಾಸ ಮಾಡುವವರೆಲ್ಲರೂ ಕನ್ನಡವನ್ನು ಕಲಿಯಲೇಬೇಕು. ಹಾಗೆಂದು ನಾವು ಸುಮ್ಮನಿರುವಂತಿಲ್ಲ. ಕನ್ನಡಿಗರು ದುರಭಿಮಾನಿಗಳಲ್ಲ. ಆದರೆ ಕನ್ನಡದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಬೇರೆ ರಾಜ್ಯಗಳಲ್ಲಿ ದುರಭಿಮಾನಿಗಳಂತೆ ನಾವು ಆಗಬೇಕಿಲ್ಲ. ಆದರೆ ನಮ್ಮ ಭಾಷೆ, ನೆಲ, ನಾಡಿನ ಬಗೆ ಗೌರವ, ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ವಿಧಾನಸೌಧದ ಶಿಲ್ಪಿ ಕೆ. ಶ್ರೀಧರ್ ಮೂರ್ತಿ ನಿರ್ಮಾಣ ಮಾಡಲಿದ್ದು, ಭುವನೇಶ್ವರಿ ಪ್ರತಿಮೆ 31 ಟನ್ ತೂಕ ಹೊಂದಿದ್ದು, ಅಂದಾಜು 21. 24 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 4 ತಿಂಗಳ ಒಳಗೆ ಪ್ರತಿಮೆ ನಿರ್ಮಾಣ ಮಾಡಿ ಮುಗಿಸಲು ಡೆಡ್ಲೈನ್ ವಿಧಿಸಲಾಗಿದ್ದು, ಈ ವರ್ಷದ ಕನ್ನಡ ರಾಜ್ಯೋತ್ಸವದಂದು ಪ್ರತಿಮೆ ಲೋಕಾರ್ಪಣೆಯಾಗಲಿದೆ.