ಷಡ್ಯಂತ್ರ, ಪಿತೂರಿ ರಾಜಕಾರಣವು ಬಿಎಸ್‌ವೈ ಅವರನ್ನು ಹಿಂಬಾಲಿಸಿಕೊಂಡು ಬಂದಿದೆ – ವಿಜಯೇಂದ್ರ 

ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ತಮ್ಮ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗುತ್ತಿದ್ದಂತೆಯೇ ಮಾಜಿ ಸಿಎಂ ಬಿಎಸ್ ವೈ ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು, ಸಹಜವಾಗಿ ಅನಾರೋಗ್ಯದ ಸಮಸ್ಯೆಗಳಿರುತ್ತವೆ. ಅವರು ತನಿಖಾ ತಂಡದ ಎದುರು ಜೂ.17 ರಂದು ಹಾಜರಾಗುವುದಾಗಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್ ವೈ ಪುತ್ರರಾದ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪೋಕ್ಸೊ ಪ್ರಕರಣದಲ್ಲಿ ಬಂಧಿಸದಂತೆ ಸಿಐಡಿಗೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದ್ದು, ‘ನ್ಯಾಯ ಮಂದಿರ’ದಲ್ಲಿ ಸತ್ಯಕ್ಕೆ ಜಯ ಸಿಗಲಿದೆ ಎಂದು ಹೇಳಿದರು.

ಬಿಎಸ್ ಯಡಿಯೂರಪ್ಪ ಅವರ ಮೇಲೆ ಕರ್ನಾಟಕದ ಜನರ ಆಶೀರ್ವಾದ, ಕೋಟಿ ಹೃದಯಗಳ ಪ್ರಾರ್ಥನೆ ನ್ಯಾಯ ದೇಗುಲದಲ್ಲಿ ಅನಾವರಣಗೊಂಡಿದೆ. ಷಡ್ಯಂತ್ರ, ಪಿತೂರಿ ರಾಜಕಾರಣವು ಬಿಎಸ್‌ವೈ ಅವರನ್ನು ಹಿಂಬಾಲಿಸಿಕೊಂಡು ಬರುತ್ತಲೇ ಇದೆ. ಎದೆಗುಂದದ ಅವರು ನ್ಯಾಯದ ಹಾದಿಯಲ್ಲಿ ಷಡ್ಯಂತ್ರಗಳನ್ನು ಜಯಿಸಿದ್ದಾರೆ. ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಅವರಿಗೆ ಮಧ್ಯಂತರ ಜಾಮೀನು ನೀಡಿ ‘ಯಡಿಯೂರಪ್ಪನವರು ವಿಚಾರಣೆಗಳಿಗೆ ಬೆನ್ನು ತೋರಿಸುವ ಜಾಯಮಾನದವರಲ್ಲ’ ಎನ್ನುವ ಮಾತನ್ನು ಉಲ್ಲೇಖಿಸಿರುವುದು ಬಿಎಸ್ ಯಡಿಯೂರಪ್ಪ ಅವರು ಈ ನೆಲದ ಕಾನೂನಿಗೆ ಗೌರವ ಕೊಡುವ ಪರಿಯನ್ನು ಸಾಕ್ಷೀಕರಿಸಿದೆ. ಮುಂದಿನ ದಿನಗಳಲ್ಲಿ ನ್ಯಾಯ ದೇಗುಲದಲ್ಲಿ ಸತ್ಯವೇ ಗೆಲ್ಲುತ್ತದೆಂಬ ಅಚಲ ವಿಶ್ವಾಸ ನಮ್ಮದಾಗಿದೆ’ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *