ಎಸ್‌ಐಟಿ ಎದುರು ಪ್ರಜ್ವಲ್ ಮೊಂಡಾಟ

ಬೆಂಗಳೂರು-ಅತ್ಯಾಚಾರ,ಲೈಂಗಿಕ ದೌರ್ಜನ್ಯ ಪ್ರಕರಣದ ಬಂಧಿತ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿಶೇಷ ತನಿಖಾ ತಂಡ (ಎಸ್‌ಐಟಿ) ದ ಕಚೇರಿಯಲ್ಲಿ ಎರಡನೇ ದಿನ ವಿಚಾರಣೆ ಎದುರಿಸಿದ್ದು, ಅಧಿಕಾರಿಗಳ ಯಾವುದೇ ಪ್ರಶ್ನೆಗೂ ಸೂಕ್ತ ಉತ್ತರ ನೀಡದೇ ಅಸಹಕಾರ ತೋರಿದ್ದಾರೆ
ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ಅಧಿಕಾರಿಗಳಿಗೆ ಯಾವುದೇ ಸೂಕ್ತ ಉತ್ತರ ನೀಡಿಲ್ಲ ,ಇದು ರಾಜಕೀಯ ಪಿತೂರಿ. ಸುಖಾಸುಮ್ಮನೆ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಿಮ್ಮ ಕೆಲಸ ನೀವು ಮಾಡಿ. ನಾನೇನು ಹೇಳಲ್ಲ ಎಂದಿದ್ದಾರೆ.
ಎಸ್‌ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ನಮ್ಮ ವಕೀಲರನ್ನು ಕೇಳಬೇಕು ಎಂದು ಹೇಳುತ್ತಿರುವ ಪ್ರಜ್ವಲ್ ನಿನ್ನೆ ಇಡೀ ದಿನದ ವಿಚಾರಣೆಯಲ್ಲಿ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ತನಿಖಾಧಿಕಾರಿ ಎಷ್ಟೇ ಪ್ರಶ್ನೆ ಮಾಡಿದರೂ ನಮ್ಮ ವಕೀಲರು ಕೇಳಬೇಕು ಎಂದು ಹೇಳಿದ್ದಾರೆ. ನನಗೂ ಪ್ರಕರಣಕ್ಕೂ ಸಂಬಂಧವಿಲ್ಲ. ನೀವು ಏನೇ ಪ್ರಶ್ನೆ ಕೇಳಿದರೂ ನಮ್ಮ ವಕೀಲರ ಬಳಿ ಮಾತನಾಡಿ ಹೇಳುತ್ತೇನೆ. ಏನೇ ಉತ್ತರ ಕೊಡುವುದಿದ್ದರೂ ವಕೀಲರ ಬಳಿ ಮಾತನಾಡಿ ಆ ನಂತರ ಉತ್ತರಿಸುತ್ತೇನೆ ಎಂದಿದ್ದಾರೆ ಎನ್ನಲಾಗಿದೆ.ಪ್ರಜ್ವಲ್ ರೇವಣ್ಣನನ್ನು ನಿನ್ನೆ ಕೋರ್ಟ್ ಮುಂದೆ ಹಾಜರುಪಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಆರು ದಿನಗಳ ಕಾಲ ಕಸ್ಟಡಿಗೆ ಪಡೆದು ರಾತ್ರಿ ೯ ಗಂಟೆ ತನಕ ವಿಚಾರಣೆ ನಡೆಸಿದ ಅಧಿಕಾರಿಗಳು, ನಂತರ ಊಟ ನೀಡಿದರು.
ರಾತ್ರಿ ೧೧:೩೦ರ ವರೆಗೆ ಕುಳಿತಿದ್ದ ಪ್ರಜ್ವಲ್ ನಂತರ ನಿದ್ದೆಗೆ ಜಾರಿದ್ದಾರೆ ಎನ್ನಲಾಗಿದೆ. ಇಂದು ಕೂಡ ವಿಚಾರಣೆ ನಡೆಸಲಿರುವ ಅಧಿಕಾರಿಗಳು ನಾಳೆ ಇಲ್ಲವೇ ನಾಳಿದ್ದು ಸ್ಥಳ ಮಹಜರು ಪ್ರಕ್ರಿಯೆಗೆ ಹಾಸನ, ಹೊಳೆನರಸೀಪುರಕ್ಕೆ ಕರೆದುಕೊಂಡು ಹೋಗುವ ಸಾಧ್ಯತೆಯಿದೆ.

ಕಳ್ಳತನದ ಬಗ್ಗೆ ದೂರು:
ನ್ಯಾಯಾಲಯದ ವಿಚಾರಣೆ ವೇಳೆ ಸಂಸದ ಪ್ರಜ್ವಲ್ ರೇವಣ್ಣ ನನ್ನ ಮೊಬೈಲ್ ಕಳೆದುಹೋಗಿದ್ದು, ಒಂದು ವರ್ಷದ ಹಿಂದೆಯೇ ಕಳೆದುಹೋಗಿರುವ ಸಂಬಂಧ ಹೊಳೆನರಸೀಪುರ ಠಾಣೆಯಲ್ಲಿ ದೂರು ನೀಡಿರುವುದಾಗಿಯೂ ಹೇಳಿದ್ದಾರೆ.
ಪ್ರಜ್ವಲ್ ಅವರ ಪ್ರಾಥಮಿಕ ವಿಚಾರಣೆ ನಡೆಸಿರುವ ಎಸ್ ಐಟಿ ಅಧಿಕಾರಿಗಳು ೧೬೧ ಹೇಳಿಕೆ ದಾಖಲಿಸಿ ಅದರಲ್ಲಿ ಮೊಬೈಲ್ ಕುರಿತು ದಾಖಲಿಸಿದೆ. ನೀವು ಹೇಳುತ್ತಿರುವ ಮೊಬೈಲ್ ನನ್ನ ಬಳಿ ಇಲ್ಲ. ಕಳೆದ ವರ್ಷವೇ ಫೋನ್ ಕಳೆದುಕೊಂಡಿದ್ದು, ಆ ಬಗ್ಗೆ ಹೊಳೆನರಸೀಪುರ ಠಾಣೆಯಲ್ಲಿ ದೂರು ಕೂಡ ನೀಡಿದ್ದೇನೆ ಎಂದು ಪ್ರಜ್ವಲ್ ಹೇಳಿದ್ದಾರೆ. ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಎಸ್‌ಐಟಿ ಪರಿಶೀಲಿಸಲಿದೆ.
ಅತ್ಯಾಚಾರ ಮಾಡಿಲ್ಲ:
ನೀವು ತೋರಿಸಿರುವ ವಿಡಿಯೋಗಳಲ್ಲಿ ಇರುವುದು ನಾನಲ್ಲ. ಅವರೆಲ್ಲ ನನಗೆ ಪರಿಚಯ ಅಷ್ಟೇ. ನಾನು ಯಾರನ್ನೂ ಅತ್ಯಾಚಾರ ಮಾಡಿಲ್ಲ. ಅತ್ಯಾಚಾರ ಆರೋಪಗಳಿಗೂ ನನಗೂ ಯಾವ ಸಂಬಂಧವೂ ಇಲ್ಲ. ವಿಡಿಯೋಗಳ ಬಗ್ಗೆ ನಂಗಷ್ಟು ಗೊತ್ತಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋಗಳನ್ನು ತೋರಿಸಿ ಪ್ರಶ್ನಿಸಿದಾಗ ತನ್ನ ಮೇಲಿರುವ ಎಲ್ಲ ಆರೋಪಗಳನ್ನು ಪ್ರಜ್ವಲ್ ತಳ್ಳಿ ಹಾಕಿದ್ದಾರೆ.
ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿರುವ ಮೊಬೈಲ್ ಪ್ರಜ್ವಲ್ ವಿರುದ್ಧದ ಪ್ರಕರಣದಲ್ಲಿ ಪ್ರಬಲವಾದ ಸಾಕ್ಷ್ಯವಾಗಿದೆ. ಈ ಮೊಬೈಲ್ ಸಿಕ್ಕಿದರೆ, ಒಂದು ವೇಳೆ ವಿಡಿಯೋಗಳನ್ನು ಅಳಿಸಿದ್ದರೂ ಅದರಿಂದ ರಿಟ್ರೀವ್ ಮಾಡಬಹುದು. ಆದರೆ ಮೊಬೈಲ್ ಸಂಪೂರ್ಣ ನಾಶವಾಗಿದ್ದರೆ, ಯಾವುದೇ ಮೂಲ ರೆಕಾರ್ಡ್‌ಗಳು ಸಿಗಲಾರದು. ಅದರಿಂದ ಫಾರ್ವರ್ಡ್ ಆಗಿರುವ ವಿಡಿಯೋಗಳು ಸೆಕೆಂಡರಿ ಸಾಕ್ಷ್ಯಗಳೆನಿಸಿಕೊಳ್ಳುತ್ತವೆ. ಹೀಗಾಗಿ ಮೊಬೈಲ್ ಪಡೆಯಲು ಎಸ್‌ಐಟಿ ಪ್ರಯತ್ನ ನಡೆಸಬೇಕಿದೆ.

Leave a Reply

Your email address will not be published. Required fields are marked *