ಬೆಂಗಳೂರು :ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವನ್ನು ದಿಕ್ಕು ತಪ್ಪಿಸಿ ಭ್ರಷ್ಟರನ್ನು ರಕ್ಷಿಸುವ ಉದ್ದೇಶದಿಂದ ವಿಶೇಷ ತನಿಖಾ ತಂಡವನ್ನು ರಚಿಸಿರುವ ಸರ್ಕಾರ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವವರೆಗೂ ಹೋರಾಟ ನಿಲ್ಲದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರ ಆರೋಪಿಗಳನ್ನು ರಕ್ಷಿಸಲು ಹೊರಟಿದೆ. ಅದರ ಭಾಗವಾಗಿಯೇ ಎಸ್ಐಟಿ ರಚನೆ ಮಾಡಲಾಗಿದೆ. ಇದು ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ಅವರು ಟೀಕಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಂತಾರಾಜ್ಯ ವ್ಯಾಪ್ತಿಯಲ್ಲಿ ದುರುಪಯೋಗವಾಗಿರುವ ಹಿನ್ನೆಲೆಯಲ್ಲಿ ಇದು ದೊಡ್ಡ ಹಗರಣವಾಗಿದೆ. ಈ ಬಗ್ಗೆ ಸಿಬಿಐ ತನಿಖೆಹೊರತು ಪಡಿಸಿ ಇನ್ಯಾವುದೇ ತನಿಖೆಯನ್ನು ಒಪ್ಪುವುದಿಲ್ಲ. ಸಿಬಿಐ ತನಿಖೆಯ ಬೇಡಿಕೆಗೆ ಸರ್ಕಾರ ಒಪ್ಪುವವರೆಗೂ ಆರೋಪಿತ ಸಚಿವ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಿ ಅವರಿಗೆ ಶಿಕ್ಷೆಯಾಗುವವರೆಗೆ ತಾರ್ಕಿಕ ಅಂತ್ಯಕ್ಕೆ ಹೋರಾಟವನ್ನು ಕೊಂಡೊಯ್ಯಲಾಗುವುದೆಂದು ವಿಜಯೇಂದ್ರ ಹೇಳಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಚಂದ್ರಶೇಖರ್ ಅವರ ಸಾವಿಗೂ ಮುನ್ನ ಬರೆದ ಡೆತ್ನೋಟ್ನಲ್ಲಿ ಸಚಿವ ನಾಗೇಂದ್ರ ಅವರ ಹೆಸರಿದೆ. ಹಾಗಾಗಿ. ಅವರನ್ನು ಮುಖ್ಯಮಂತ್ರಿಗಳು ಸಂಪುಟದಿಂದ ಈಗಾಗಲೇ ವಜಾ ಮಾಡಬೇಕಿತ್ತು. ಆದರೆ, ಈವರೆಗೂ ಆರೋಪ ಹೊತ್ತವರನ್ನು ಅವ್ಯವಹಾರದ ಜಾಲದಿಂದ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದ್ದಾರೆ.
ಪರಿಶಿಷ್ಟ ಪಂಗಡದ ಹಿತಾಸಕ್ತಿಗೆ ದ್ರೋಹ ಬಗೆದು ಹಣ ದುರುಪಯೋಗ ಮಾಡಿಕೊಂಡಿರುವುದರ ವಿರುದ್ಧ ಹಾಗೂ ಅಮೂಲ್ಯ ಜೀವವೊಂದು ಆತ್ಮಹತ್ಯೆಗೆ ಶರಣಾಗಿರುವುದರ ಬಗ್ಗೆ ಸರ್ಕಾರ ಎಳ್ಳಷ್ಟು ತಲೆಕೆಡಿಸಿಕೊಳ್ಳದೆ ಯೂನಿಯನ್ ಬ್ಯಾಂಕ್ ಮೇಲೆ ಗೂಬೆ ಕೂರಿಸಲು ಹೊರಟಿದೆ. ಸದ್ಯ ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದರ ಹಿನ್ನೆಲೆಯಲ್ಲಿ ಗತ್ಯಂತರವಿಲ್ಲದೆ ಎಸ್ಐಟಿ ರಚಿಸಿ ಜನರ ಕಣ್ಣಿಗೆ ಮಣ್ಣೆರೆಚರಲು ಹೊರಟಿದೆ ಎಂದು ಅವರು ಟ್ವೀಟ್ನಲ್ಲಿ ಹರಿಹಾಯ್ದಿದ್ದಾರೆ.