ಬೆಂಗಳೂರು;ರಾಜ್ಯದಲ್ಲಿ ೨ ಹಂತಗಳ ಲೋಕಸಭಾ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆಯೇ ಚುನಾವಣೆ ನಿರ್ವಹಣೆ ಹಾಗೂ ಚುನಾವಣೆಯಲ್ಲಿ ಗುರಿ ಸಾಧನೆಯ ಕುರಿತು ಬಿಜೆಪಿ ನಾಯಕರು ಇಂದು ಪರಾಮರ್ಶೆ ನಡೆಸಿ ರಾಜ್ಯದಲ್ಲಿ ಎಷ್ಟು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂಬ ಬಗ್ಗೆ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸಲಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ೨೫ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು, ಈ ೨೫ ಸ್ಥಾನಗಳ ಪೈಕಿ ಅಷ್ಟು ಸ್ಥಾನಗಳನ್ನು ಗೆಲ್ಲುವ ಉಮೇದಿನಲ್ಲಿ ಬಿಜೆಪಿ ನಾಯಕರು ಇದ್ದರಾದರೂ ಮತದಾನದ ನಂತರ ೨೫ ಸ್ಥಾನಗಳನ್ನು ಉಳಿಸಿಕೊಳ್ಳುವುದು ಕಷ್ಟ ಎಂಬುದನ್ನು ಮನಗಂಡಿರುವ ಬಿಜೆಪಿ ನಾಯಕರು ಬಿಜೆಪಿ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂಬ ಬಗ್ಗೆ ಇಂದು ಪರಾಮರ್ಶೆ ನಡೆಸಿದರು.
ಚುನಾವಣೆಯ ನಿರ್ವಹಣೆ ಸಮರ್ಪಕವಾಗಿ ನಡೆದಿದೆಯೇ ಪ್ರಚಾರ ನಿರೀಕ್ಷೆಯಂತೆ ನಡೆದಿದೆಯೇ, ಪ್ರಚಾರದ ಸಂದರ್ಭದಲ್ಲಿ ಕೆಲವು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವಂತಹ ಘಟನೆಗಳು ನಡೆದಿವೆಯೇ, ಎಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಬಹುದು ಎಂಬೆಲ್ಲ ವಿಚಾರಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಬಿಜೆಪಿ ಲೋಕಸಭಾ ಚುನಾವಣೆಯನ್ನು ಬೂತ್ಮಟ್ಟದಿಂದಲೇ ನಿರ್ವಹಿಸಿದ್ದು, ಬೂತ್ಮಟ್ಟದ ವರದಿಯನ್ನು ಈಗಾಗಲೇ ಪಡೆಯಲಾಗಿದ್ದು, ಈ ವರದಿಯನ್ನಾಧರಿಸಿ ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆಲ್ಲಬಹುದು ಎಂಬ ಬಗ್ಗೆ ಚರ್ಚೆಗಳು ನಡೆದವು.
ಬಿಜೆಪಿ ವರಿಷ್ಠರು ರಾಜ್ಯದಲ್ಲಿ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಆಂತರಿಕ ಸಮೀಕ್ಷಾ ವರದಿಯನ್ನು ಪಡೆದುಕೊಂಡಿದ್ದರೂ ರಾಜ್ಯ ಘಟಕದಿಂದ ವಸ್ತುಸ್ಥಿತಿಯ ವರದಿಯನ್ನು ಬಯಸಿದ್ದು, ಅದರಂತೆ ಈ ಸಭೆಯ ಬಳಿಕ ಹೈಕಮಾಂಡ್ಗೆ ವರದಿಯನ್ನು ಕಳುಹಿಸಲಾಗುತ್ತದೆ.
ಬೆಂಗಳೂರಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಧ್ಯಕತೆಯಲ್ಲಿ ಈ ಸಭೆ ನಡೆದಿದ್ದು, ಈ ಸಭೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿಗಳಾದ ಸದಾನಂದಗೌಡ, ಬಸವರಾಜಬೊಮ್ಮಾಯಿ, ಜಗದೀಶ್ಶೆಟ್ಟರ್, ಮುಖಂಡರಾದ ಸಿ.ಟಿ ರವಿ, ಗೋವಿಂದಕಾರಜೋಳ, ಸುನಿಲ್ಕುಮಾರ್, ಶ್ರೀನಿವಾಸ ಪೂಜಾರಿ ಸೇರಿದಂತೆ ಪ್ರಮುಖನಾಯಕರುಗಳು, ಲೋಕಸಭಾ ಚುನಾವಣೆಯ ಉಸ್ತುವಾರಿಗಳು, ಪದಾಧಿಕಾರಿಗಳು, ಶಾಸಕರುಗಳು ಪಾಲ್ಗೊಂಡಿದ್ದರು.
ಮೇಲ್ಮನೆ ಇಂದು ಅಭ್ಯರ್ಥಿಗಳ ಆಯ್ಕೆ
ವಿಧಾನ ಪರಿಷತ್ನ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳಿಗೆ ಜೂ. ೬ ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಇಂದು ಸಂಜೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.
ಈ ಚುನಾವಣೆಯಲ್ಲೂ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, ೪ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಈ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಇಂದು ಸಂಜೆ ನಡೆಯುವ ಪ್ರಮುಖ ಮುಖಂಡರ ಕೋರ್ ಕಮಿಟಿ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತದೆ.
ನೈರುತ್ಯ ಪದವೀಧರ ಕ್ಷೇತ್ರಕ್ಕೆ ಮಾಜಿ ಶಾಸಕ ರಘುಪತಿಭಟ್, ಶಿವಮೊಗ್ಗ ಡಾ. ಧನಂಜಯ ಹೆಸರುಗಳಿದ್ದು ಇವರಿಬ್ಬರಲ್ಲಿ ಒಬ್ಬರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ. ಹಾಗೆಯೇ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಅಮರನಾಥ ಪಾಟೀಲ ಮತ್ತು ಸುರೇಶ್ಸಜ್ಜನ್ ಇವರ ಹೆಸರುಗಳು ಮುಂಚೂಣಿಯಲ್ಲಿದ್ದರೆ,ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಎ. ದೇವೇಗೌಡ ಮತ್ತು ಎ.ಎಚ್ ಆನಂದ್ ಅವರ ಹೆಸರುಗಳು ಇದ್ದು, ಇವರಲ್ಲಿ ಒಬ್ಬರ ಹೆಸರನ್ನು ಇಂದು ಸಂಜೆ ಆಯ್ಕೆ ಮಾಡಲಾಗುತ್ತದೆ.
ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ವೈ. ನಾರಾಯಣಸ್ವಾಮಿ ಅವರ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿದೆ.