ಬಾಲಕಿ ಕೊಂದು ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಬಂಧನ

ಕೊಡಗು- ನಿಶ್ಚಿತಾರ್ಥ ಮುಂದೂಡಿದ್ದಕ್ಕೆ ಕೋಪಗೊಂಡು ೧೬ ವರ್ಷದ ಬಾಲಕಿಯನ್ನು ಭೀಕರವಾಗಿ ಹತ್ಯೆಗೈದು, ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಪ್ರಕಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಎಸ್‌ಎಲ್‌ಸಿ ಫಲಿತಾಂಶ ಹೊರ ಬಿದ್ದ ಮೇ ೯ರಂದು ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ಬಾಲಕಿಯ ರುಂಡ ಕತ್ತರಿಸಿ ಪರಾರಿಯಾಗಿದ್ದ ಆರೋಪಿಯ ಪತ್ತೆಗೆ ಪೊಲೀಸ್ ತಂಡಗಳನ್ನು ಮಾಡಿ ಶೋಧ ಕಾರ್ಯ ನಡೆಸಲಾಗಿತ್ತು.
ಸೋಮವಾರಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ಅಡಗಿದ್ದ ಆರೋಪಿ ಪ್ರಕಾಶ್‌ನನ್ನು ಸೋಮವಾರಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.
ಇನ್ನು ಆರೋಪಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂಬ ಸುಳ್ಳು ವದಂತಿ ನಿನ್ನೆ ಹಬ್ಬಿತ್ತು,ಅದು ಪರಿಶೀಲನೆ ವೇಳೆ ಸುಳ್ಳು ಎನ್ನುವುದು ಕಂಡು ಬಂದ ಬಳಿಕ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದರು.

ಘಟನೆ ಹಿನ್ನೆಲೆ:
ಸೂರ್ಲಬ್ಬಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ಮೀನಾ, ಈ ಕುಗ್ರಾಮದಲ್ಲಿ ೧೦ನೇ ತರಗತಿ ಓದುತ್ತಿದ್ದ ಏಕೈಕ ವಿದ್ಯಾರ್ಥಿನಿಯಾಗಿದ್ದು, ಮೀನಾ ಮೇ.೦೯ರಂದು ಎಸ್‌ಎಸ್‌ಎಲ್‌ಸಿ ಪಾಸ್ ಆದ ಖುಷಿಯಲ್ಲಿದ್ದಳು. ಮತ್ತೊಂದು ಕಡೆ ಅವತ್ತೇ ಆಕೆಯ ಪ್ರಿಯಕರನ ಜೊತೆ ನಿಶ್ಚಿತಾರ್ಥ ನಡೆದಿತ್ತು. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ ೧೮ ವರ್ಷ ತುಂಬುವ ವರೆಗೆ ಮೀನಾಳಿಗೆ ಮದುವೆ ಮಾಡದಂತೆ ಪೋಷಕರ ಬಳಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.
ಈ ವಿಚಾರಣೆ ಜಗಳ ಶುರು ಮಾಡಿದ್ದ ಮೀನಾಳ ಪ್ರಿಯಕರ ಮಚ್ಚು ತಂದು ಮೀನಾಳ ಕತ್ತು ಕತ್ತರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೃತ ಮೀನಾ ಮನೆಯಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಶಾಲೆಗೆ ಮನೆಯಿಂದ ಗುಡ್ಡ ಗಾಡು ರಸ್ತೆಯಲ್ಲಿ ನಿತ್ಯ ನಡೆದೇ ಸಾಗುತ್ತಿದ್ದಳು. ಪಾಠದಲ್ಲಿ ಮಾತ್ರವಲ್ಲ ಆಟದಲ್ಲೂ ಬಹಳ ಚೂಟಿ ಇದ್ದಳು. ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿದ್ದಳು. ಒಬ್ಬಳೇ ಆದರೂ ಶಾಲೆಗೆ ಹೋಗ್ತಾಳಲ್ಲಾ ಅಂತ ಊರವರೆಲ್ಲಾ ಈಕೆಯ ಬಗ್ಗೆ ಹೆಮ್ಮೆ ಪಡ್ತಾ ಇದ್ರು. ಆದರೆ ಹದಿಹರೆಯದ ವಯಸ್ಸಿನಲ್ಲಿ ಈಕೆಗೆ ಲವ್? ಆಗಿದೆ. ೩೫ ವರ್ಷದ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ಎಂಬುವವನ ಜೊತೆ ಮೀನಾಗೆ ಪ್ರೀತಿ ಬೆಳೆದಿತ್ತು.
ಪ್ರೀತಿ ಬೆಳೆದಿತ್ತು:
ಮೀನಾಳ ಗ್ರಾಮದಿಂದ ಮೂರು ಕಿ.ಮೀಟರ್ ದೂರದ ಹಮ್ಮಿಯಾಲ ಗ್ರಾಮದ ಪ್ರಕಾಶ್ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಅಷ್ಟೋ ಇಷ್ಟೋ ಸಂಪಾದನೆ ಮಾಡುತ್ತಿದ್ದ. ಅದು ಬಿಟ್ಟರೆ ಕಳೆದೊಂದು ವರ್ಷದಿಂದ ಮೀನಾಳ ಹಿಂದೆಯೇ ಸುತ್ತುತ್ತಿದ್ದ. ಇವರಿಬ್ಬರು ಪ್ರೀತಿಸುತ್ತಿರುವುದ ಊರಿಗೆ ಗೊತ್ತಿತ್ತು. ಇವರಿಬ್ಬರ ಆತ್ಮೀಯತೆ ಎಷ್ಟಿತ್ತೆಂದರೆ ಈತನೇ ತನ್ನ ಬೈಕಿನಲ್ಲಿ ಮೀನಾಳನ್ನ ಮನೆಯಿಂದ ಶಾಲೆಗೆ ಡ್ರಾಪ್ ಮಾಡುತ್ತಿದ್ದ. ಮೇ.೯ರ ಎಸ್‌ಎಸ್‌ಎಲ್‌ಸಿ ಫಲಿತಾಂಶದ ದಿನವೇ ಮೀನಾ ಹಾಗೂ ಪ್ರಕಾಶ್??ಗೆ ನಿಶ್ಚಿತಾರ್ಥ ನೆರವೇರಿತ್ತು. ಬಂಧು ಮಿತ್ರರ ಎದುರು ಇಬ್ಬರು ಖುಷಿ ಖುಷಿಯಾಗಿಯೇ ಕೇಕ್ ಕಟ್ ಮಾಡಿ ರಿಂಗ್ ಪಾಸ್ ಮಾಡಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಆದರೆ ಅಪ್ರಾಪ್ತೆಗೆ ಎಂಗೇಜ್ಮೆಂಟ್ ನಡೆಯುತ್ತಿದೆ ಎಂಬ ಮಾಹಿತಿಯನ್ನ ಯಾರೋ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಭೇಟಿ ನೀಡಿದ ಇಲಾಖೆ ಅಧಿಕಾರಿಗಳು ಮೀನಾಳ ಪೋಷಕರಿಗೆ ಈಗಲೇ ಮದುವೆ ಮಾಡದಂತೆ ತಿಳಿ ಹೇಳಿದ್ದಾರೆ.
ರುಂಡದ ಜೊತೆ ಪರಾರಿ:
ಮೀನಾಳಿಗೆ ೧೮ ವರ್ಷ ತುಂಬಿದ ಬಳಿಕವೇ ವಿವಾಹ ಮಾಡುವಂತೆ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ಬಂದಿದ್ದಾರೆ. ಇಷ್ಟೆಲ್ಲ ಆದ ಬಳಿಕ ಪ್ರಕಾಶ್ ಮರ ಕಡಿಯುವ ಮಚ್ಚಿನೊಂದಿಗೆ ಮೀನಾಳ ಮನೆಗೆ ಬಂದಿದ್ದು ಮೀನಾ ಹಾಗೂ ಅವಳ ಪೋಷಕರ ಜೊತೆ ಜಗಳವಾಡಿದ್ದಾನೆ. ೧೮ ವರ್ಷ ಆಗುವವರೆಗೆ ಮದುವೆ ಬೇಡ ಎಂದು ಪೋಷಕರು ಹೇಳಿದ್ದು ಕೋಪಗೊಂಡು ಜಗಳ ಜೋರಾಗಿದೆ. ಇದರಿಂದ ಕುಪಿತಗೊಂಡ ಪ್ರಕಾಶ್ ಮಚ್ಚಿನಿಂದ ಮೊದಲು ತಾಯಿ ಜಾನಕಿಯ ಕೈ ಕಡಿದಿದ್ದಾನೆ, ಜಾನಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ತಡೆಯಲು ಬಂದ ತಂದೆ ಸುಬ್ರಮಣಿಗೆ ಜಾಡಿಸಿ ಒದ್ದ ರಭಸಕ್ಕೆ ಅವರೂ ಕುಸಿದು ಬಿದ್ದಿದ್ದಾರೆ. ಬಳಿಕ ಪ್ರಕಾಶ್, ಮೀನಾಳನ್ನ ಎಳೆದೊಯ್ದಿದ್ದಾನೆ. ಮನೆಯಿಂದ ಅಂದಾಜು ೩೦೦ ಮೀಟರ್ ದೂರದವರೆಗೆ ಎಳೆದೊಯ್ದು ಮೀನಾಳ ಕುತ್ತಿಗೆಯನ್ನೇ ಕಡಿದು ರುಂಡ ಮುಂಡ ಬೇರ್ಪಡಿಸಿ ರುಂಡದೊಂದಿಗೆ ಪರಾರಿಯಾಗಿದ್ದನು.

Leave a Reply

Your email address will not be published. Required fields are marked *