ತೈಲ ದರ ಏರಿಕೆ – ಬಿಜೆಪಿ ನಾಯಕರಿಂದ ಸೈಕಲ್ ಜಾಥಾ ಪ್ರತಿಭಟನೆ

ತೈಲ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ದ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಸೈಕಲ್ ಜಾಥಾ ಮೂಲಕ ಬಿಜೆಪಿ ನಾಯಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಿಂದ ವಿಧಾನಸೌಧದ ವರೆಗೆ ಸೈಕಲ್ ಜಾಥಾ ಆರಂಭಿಸಲಾಯಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಸೈಕಲ್ ಜಾಥಾ ಮೂಲಕ ಪ್ರತಿಭಟನೆಗೆ ಮುಂದಾದರು. ಈ ವೇಳೆ ಜಾಥಾ ಪ್ರಾರಂಭವಾದ 500 ಮೀಟರ್ ದೂರದಲ್ಲೇ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ಪ್ರತಿಭಟನೆಗೆಂದೆ 150 ಸೈಕಲ್‌ಗಳನ್ನು ಬಿಜೆಪಿ ನಾಯಕರು ಬಾಡಿಗೆಗೆ ತಂದಿದ್ದರು. ಸಿಲ್ಕ್ ಬೋರ್ಡ್ ಬಳಿ ಇರುವ ‘ಸೈಕಲ್ ಟು ಗೋ’ ಸಂಸ್ಥೆಯಿಂದ ಸೈಕಲ್‌ಗಳನ್ನು ಬಾಡಿಗೆಗೆ ಪಡೆದಿದ್ದರು. 

ಬಿಜೆಪಿಯವರ ಸೈಕಲ್ ಜಾಥಾ ತಡೆಗೆ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಬಿಜೆಪಿ ಕಚೇರಿ ಎದುರು 3 ಪೊಲೀಸ್ ವ್ಯಾನ್, 1 ಬಿಎಂಟಿಸಿ ಬಸ್, 4 ಪೊಲೀಸ್ ಜೀಪ್‌ಗಳನ್ನು ತಂದು ನಿಲ್ಲಿಸಲಾಗಿತ್ತು. ಬಿಜೆಪಿ ಕಚೇರಿ ಎದುರಿನ ರಸ್ತೆಯಲ್ಲಿ ಪೊಲೀಸ್ ನಾಕಾಬಂದಿ ಹಾಕಲಾಗಿತ್ತು. ಕಚೇರಿ ಎದುರಿನ ರಸ್ತೆಗೆ ಎರಡೂ ಕಡೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ  ಬಿವೈ ವಿಜಯೇಂದ್ರ, ಶಾಸಕ ಅಶ್ವತ್ ನಾರಾಯಣ್, ಎಂಎಲ್ ಸಿ ಸಿಟಿ ರವಿ, ಛಲವಾದಿ ನಾರಾಯಣಸ್ವಾಮಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *