ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ – ಮದ್ಯ ದರ ಜುಲೈ 1ರಿಂದ ಅಗ್ಗ

ರಾಜ್ಯದಲ್ಲಿ ಜು.1 ರಿಂದ ಪರಿಷ್ಕೃತ ದರ ಜಾರಿಯಾಗಲಿವೆ. ನೆರೆಯ ರಾಜ್ಯಗಳ ಮದ್ಯದ ದರಗಳಿಗೆ ಸಮೀಪಿಸುವಂತೆ ದರ ಪರಿಷ್ಕರಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಫೆಬ್ರುವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಅಗ್ಗದ ಕೆಲ ಮದ್ಯಗಳು ದುಬಾರಿಯಾಗಲಿದ್ದರೆ, ದುಬಾರಿ ಮದ್ಯಗಳು ದರ ಸ್ವಲ್ಪ ಕಮ್ಮಿಯಾಗಲಿದೆ.

ರಾಜ್ಯ ಸರ್ಕಾರವು ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳುವುದಕ್ಕಾಗಿ ಸತತವಾಗಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ (ಎಇಡಿ) ಹೆಚ್ಚಿಸುತ್ತಾ ಬಂದಿತ್ತು. 2023ರ ಜುಲೈನಲ್ಲಿ ಭಾರತೀಯ ಉತ್ಪಾದಿತ ಮದ್ಯದ ಮೇಲಿನ ಎಇಡಿ ಹೆಚ್ಚಿಸಿದ್ದರೆ, 2024ರ ಜನವರಿಯಲ್ಲಿ ಬಿಯರ್ ಮೇಲಿನ ಎಇಡಿ ಹೆಚ್ಚಿಸಲಾಗಿತ್ತು. ಇನ್ನು ದುಬಾರಿ ಮದ್ಯಗಳ ಬೆಲೆ ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ದರ ಹೆಚ್ಚಾಗಿದೆ. ಆದ್ದರಿಂದ ನೆರೆ ರಾಜ್ಯಗಳ ಮದ್ಯದ ದರವನ್ನು ಪರಿಗಣಿಸಿ ಸಮತೋಲನ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.  ರಾಜ್ಯದಲ್ಲಿ ಈವರೆಗೆ 18 ಸ್ಲ್ಯಾಬ್‌ಗಳಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಸ್ಲ್ಯಾಬ್‌ಗಳ ಸಂಖ್ಯೆಯನ್ನು 16ಕ್ಕೆ ಇಳಿಸಲಾಗಿದೆ. ಪ್ರತಿ ಬಲ್ಕ್ ಲೀಟರ್‌ ಮದ್ಯದ ಘೋಷಿತ ಉತ್ಪಾದನಾ ದರ 449 ರೂ. ಮೊದಲ ಸ್ಲ್ಯಾಬ್‌ನಲ್ಲಿದ್ದರೆ, 15,001 ರೂ.ಗಿಂತ ಮೇಲಿನ ಘೋಷಿತ ದರದ ಎಲ್ಲ ಮದ್ಯಗಳನ್ನು 18ನೇ ಸ್ಲ್ಯಾಬ್‌ನಲ್ಲಿ ಇಡಲಾಗಿತ್ತು. ಪರಿಷ್ಕೃತ ಪಟ್ಟಿಯ ಪ್ರಕಾರ, ಪ್ರತಿ ಬಲ್ಕ್ ಲೀಟರ್‌ನ ಘೋಷಿತ ಉತ್ಪಾದನಾ ದರ 450 ರೂ.

ಹೊಂದಿರುವ ಮದ್ಯ ಮೊದಲ ಸ್ಲ್ಯಾಬ್‌ನಲ್ಲಿದ್ದರೆ, 20,001 ರೂ. ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಉತ್ಪಾದನಾ ದರ ಹೊಂದಿರುವ ಮದ್ಯವನ್ನು ಈಗ 16ನೇ ಸ್ಲ್ಯಾಬ್‌ಗೆ ಸೇರಿಸಲಾಗಿದೆ. ರಾಜ್ಯದಲ್ಲಿ ಎಇಡಿ ಪ್ರಮಾಣ ಹೆಚ್ಚಿರುವ ಕಾರಣಕ್ಕೆ ನೆರೆಹೊರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಸ್ಲ್ಯಾಬ್‌ಗಳ ಮದ್ಯದ ದರ ದುಬಾರಿಯಾಗಿದೆ. ಈ ಕಾರಣಕ್ಕೆ ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಪೂರೈಕೆಯಾಗುತ್ತಿದೆ. ಗಡಿ ಭಾಗದ ಜಿಲ್ಲೆಗಳ ಜನರು ನೆರೆಯ ರಾಜ್ಯಗಳಿಗೆ ಹೋಗಿ ಮದ್ಯ ಖರೀದಿಸುತ್ತಿದ್ದಾರೆ. ಇದರಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಅಬಕಾರಿ ತೆರಿಗೆ ನಷ್ಟವಾಗುತ್ತಿದೆ.

Leave a Reply

Your email address will not be published. Required fields are marked *