ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿದಂತೆ ನಟ ದರ್ಶನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಪ್ರಕರಣ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ. ಕೆಲವು ಫ್ಯಾನ್ಸ್ ನಮ್ಮ ಬಾಸ್ ಜೊತೆ ನೀವು ಸಿನಿಮಾ ಮಾಡಿದ್ದೀರಿ ಅಂತ ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡಿದ್ದರು.

ಈಗ ಹೇಳ್ತೀನಿ, ನಾನು ದುಡ್ಡು ಮಾಡಿದ ಮೇಲೆ ನಿಮ್ಮ ಬಾಸ್ಗೆ ದುಡ್ಡು ಕೊಟ್ಟು ಸಿನಿಮಾ ಮಾಡಿರೋದು. ಆ ಲ್ಯಾಂಬೋರ್ಗಿನಿ ಅಂತ ಮೂರೊತ್ತು ಅಂತಾರಲ್ವಾ ಅದಕ್ಕೆ ಅಡ್ವಾನ್ಸ್ ಕೊಟ್ಟಿದ್ದೇ ನಾನು ಎಂದಿದ್ದಾರೆ. ಅವರ ದುಡ್ಡು ಅವರಿಗೆ ಕೊಟ್ಟಿದ್ದೀನಿ. ನಾನೇನು ಬಿಟ್ಟಿ ಕೆಲಸ ಮಾಡಿಸಿಕೊಂಡಿಲ್ಲ. ಅವರು ಏನು ಬೆಲೆ ಕೊಟ್ಟಿದ್ದಾರೋ ಅದಕ್ಕೆ ತಕ್ಕಂತೆ ಕೆಲಸ ತಗೊಂಡಿದ್ದೀನಿ ಎಂದು ಹೇಳಿದರು.

ನಮ್ಮನ್ನು ನಂಬಿಕೊಂಡು ಬಂದವರ ಕೈ ಬಿಡಬಾರದು. ತಿನ್ನೋ ಅನ್ನಕ್ಕೆ ಮಣ್ಣು ಹಾಕುವ ಕೆಲಸ ಮಾಡಬಾರದು. ಎ2 ಸ್ವಲ್ಪ ಯೋಚಿಸಬೇಕಿತ್ತು. ತಾಳ್ಮೆ ಅನ್ನೋದು ತುಂಬಾನೇ ಅವಶ್ಯಕವಾಗುತ್ತದೆ. ಹಳ್ಳಕ್ಕೆ ಬಿದ್ದಿದ್ದಾರೆ, ಆಳಿಗೆ ಒಂದೊಂದು ಕಲ್ಲು ಅನ್ನೋ ಗುಂಪಿಗೆ ಸೇರಿದ ವ್ಯಕ್ತಿ ನಾನಲ್ಲ ಎಂದು ಹೇಳಿದರು.

ನಾನು ಮೊದಲು ದರ್ಶನ್ ಗುಂಪಲ್ಲಿ ಇದ್ದೆ. ದೇವರು ನನ್ನನ್ನು ಹೊರಗೆ ಕರೆದುಕೊಂಡು ಬಂದ. ಗಿಡವಾಗಿ ಬಗ್ಗದು ಮರವಾಗಿ ಬಗ್ಗೋದಿಲ್ಲ. ತಪ್ಪು ಮಾಡಿದಾಗ ತಿದ್ದಿಕೊಳ್ಳಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು. ದರ್ಶನ್ ಅವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಇವತ್ತು ನಾನು ಹಾಕಿದ ಪೋಸ್ಟ್ ಯಾರಿಗೋ ಒಬ್ಬ ವ್ಯಕ್ತಿಗಾಗಿ ಹಾಕಿಲ್ಲ. ತಾಳ್ಮೆಯಿಂದ ಕಾದರೆ ಏನಾಗುತ್ತೆ? ಅನ್ನೋದಕ್ಕೆ ಈ ಪೋಸ್ಟ್ ಹಾಕಿದ್ದೆ. ಯಾವುದೋ ಒಬ್ಬ ವ್ಯಕ್ತಿಗೆ ಮುಟ್ಟಬೇಕು. ಒಬ್ಬ ವ್ಯಕ್ತಿ ಹಳ್ಳಕ್ಕೆ ಬಿದ್ದಿದ್ದಾನೆ ಎಂದು ಉಮಾಪತಿ ತಿಳಿಸಿದ್ದಾರೆ.