ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿದಂತೆ ನಟ ದರ್ಶನ್ ನನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಚಿತ್ರದುರ್ಗದಲ್ಲಿರುವ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ವಿಜಯೇಂದ್ರ ಬಳಿ ರೇಣುಕಾಸ್ವಾಮಿ ಪೋಷಕರು ಕಣ್ಣೀರಿಟ್ಟಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಟ ದರ್ಶನ್ & ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಇದೊಂದು ಅಮಾನುಷ ಕೃತ್ಯ ರಾಷ್ಟ್ರಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ರೇಣುಕಾಸ್ವಾಮಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಬೇಕು. ಗಂಭೀರವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಆರೋಪಿಗಳು ಎಷ್ಟೇ ದೊಡ್ಡವರಾಗಿದ್ದರೂ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಈವರೆಗೆ ಸರ್ಕಾರದ ಸಚಿವರು ರೇಣುಕಾಸ್ವಾಮಿ ಮನೆಗೆ ಬಂದಿಲ್ಲ. ಇಂದು ಗೃಹ ಸಚಿವ ಪರಮೇಶ್ವರ್ ಬರುತ್ತಾರೆಂಬ ಮಾಹಿತಿ ಇದೆ. ಸರ್ಕಾರ ಕೂಡಲೇ ರೇಣುಕಾಸ್ವಾಮಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು. ಮೃತ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು. ಬಿಜೆಪಿ ವತಿಯಿಂದ ರೇಣುಕಾಸ್ವಾಮಿ ಕುಟುಂಬಕ್ಕೆ 2 ಲಕ್ಷ ರೂ. ನೆರವು ನೀಡಿದ್ದೇವೆ ಎಂದು ಬಿವೈ ವಿಜಯೇಂದ್ರ ತಿಳಿಸಿದ್ದಾರೆ..