ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಹಸ್ತ್ರತಾಲ್ ಚಾರಣಕ್ಕೆ ತೆರಳಿದ್ದವರ ಪೈಕಿ ಕರ್ನಾಟಕದ 9 ಮಂದಿ ಮೃತಪಟ್ಟಿದ್ದರು. ಚಾರಣದ ಗಮ್ಯ ತಲುಪಿ ವಾಪಸ್ ಶಿಬಿರಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಅವರು ಶಿಬಿರದಿಂದ ಸುಮಾರು ಒಂದೂವರೆ ಅಥವಾ ಎರಡು ಗಂಟೆಗಳ ದೂರದಲ್ಲಿದ್ದಾಗ, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಹಿಮಪಾತ ಪ್ರಾರಂಭವಾಗಿ ಸಂಜೆ 4 ಗಂಟೆಯ ಹೊತ್ತಿಗೆ ಹಿಮಪಾತವು ತೀವ್ರಗೊಂಡು ಸಂಜೆ 6 ಗಂಟೆ ವೇಳೆಗೆ ಇಬ್ಬರು ಚಾರಣಿಗರು ಹವಾಮಾನ ವೈಪರೀತ್ಯಕ್ಕೆ ಮೃತಪಟ್ಟಿದ್ದರು. ಹಿಮದ ಹೊದಿಕೆಯಿಂದ ಬಚಾವಾದ 13 ಮಂದಿ ಚಾರಣಿಗರು ಕೊನೆಗೂ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಇದೇ ವೇಳೆ ಬೆಂಗಳೂರಿನ 22 ಚಾರಣಿಗರ ತಂಡ ಚಾರಣಕ್ಕೆ ಎಂದು ಉತ್ತರಾಖಂಡಕ್ಕೆ ತೆರಳಿದ್ದು, ಈ ವೇಳೆ ಹಿಮಪಾತ ಸಂಭವಿಸಿ 9 ಮಂದಿ ಚಾರಣಿಗರು ಸಾವನ್ನಪ್ಪಿದ್ದಾರೆ. ಹಿಮದ ನಡುವೆ ಸಿಲುಕಿದ 13 ಜನರನ್ನು ಹೆಲಿಕಾಪ್ಟರ್ ಮೂಲಕ ಡೆಹ್ರಾಡೂನ್ಗೆ ಸುರಕ್ಷಿತವಾಗಿ ಕರೆ ತರಲಾಯಿತು. ಅನಂತರ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ. ಇಲ್ಲಿಂದ ಅವರ ಮನೆಗಳಿಗೆ ತಲುಪಿಸುವ ಕೆಲವನ್ನು ಸಹ ರಾಜ್ಯ ಸರ್ಕಾರ ಮಾಡಿದೆ. ಮೃತ ದೇಹಗಳನ್ನು ಉತ್ತರ ಕಾಶಿಗೆ ತರಲಾಗಿದ್ದು, ಅಲ್ಲಿಂದ ಡೆಹ್ರಾಡೂನ್ ಮತ್ತು ಅಲ್ಲಿಂದ ದೆಹಲಿ ಏರ್ ಪೋರ್ಟ್ಗೆ ತರಲಾಗಿದೆ. ಇಂದು ಬೆಳಗ್ಗೆ ಮೃತಪಟ್ಟವರ 9 ದೇಹಗಳು ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಬರಲಿದ್ದು, ಏರ್ಪೋರ್ಟ್ನಿಂದ ಆಂಬ್ಯುಲೆನ್ಸ್ ಮೂಲಕ ಮೃತರ ಕುಟುಂಬಗಳಿಗೆ ತಲುಪಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡರು ಹೇಳಿದ್ದಾರೆ. ಇದನ್ನೂ ಓದಿ:- ಉತ್ತರಾಖಂಡದಲ್ಲಿ ಸಿಲುಕ್ಕಿದ್ದ ಕರ್ನಾಟಕ ಮೂಲದ 9 ಚಾರಣಿಗರು ಸಾವು

ಕಣ್ಮರೆಯಾಗಿದ್ದ ತಮ್ಮ ಕುಟುಂಬದವರಿಗಾಗಿ ಸಂಬಂಧಿಕರು, ಮಕ್ಕಳಿಗಾಗಿ ಪೋಷಕರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾತರದಿಂದ ಕಾದು ಕುಳಿತಿದ್ದರು. ತಮ್ಮವರು ಕಾಣಿಸುತ್ತಿದ್ದಂತೆಯೇ ಸಂತೋಷದ ಕಣ್ಣೀರು, ಬಿಗಿಯಾದ ಅಪ್ಪುಗೆ ಹಾಗೂ ಸುರಕ್ಷಿತವಾಗಿ ಮರಳಿದ್ದಕ್ಕಾಗಿ ಕೃತಜ್ಞತೆಯ ಭಾವನೆಗಳು ಅವರ ಮುಖದಲ್ಲಿ ಕಾಣತೊಡಗಿತು. ರಕ್ಷಣೆಗೊಳಗಾದ ಚಾರಣಿಗರನ್ನು ಹೊತ್ತ ವಿಮಾನ ಡೆಹ್ರಾಡೂನ್ನಿಂದ ಬೆಂಗಳೂರಿನ ಕೆಐಎಯಲ್ಲಿ ರಾತ್ರಿ 8:46 ಕ್ಕೆ ಇಳಿಯಬೇಕಿತ್ತು. ಆದರೆ, 30 ನಿಮಿಷಗಳಷ್ಟು ತಡವಾಗಿ ರಾತ್ರಿ 9:20 ಕ್ಕೆ ಬಂದಿಳಿಯಿತು. ಈ ವೇಳೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಸಾಕಷ್ಟು ಆತಂಕಕ್ಕೊಳಗಾಗಿದ್ದರು. ರಾತ್ರಿ 10 ಗಂಟೆ ವೇಳೆ ತಮ್ಮನ್ನು ನೋಡಿದ ಕೂಡಲೇ ನಿಟ್ಟುಸಿರು ಬಿಟ್ಟರು.
ಇದನ್ನೂ ಓದಿ:- ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಕಾರು- ಮೂವರ ದುರ್ಮರಣ