ಬೆಂಗಳೂರು: ಕೊಲೆಯಾಗುವುದಕ್ಕೂ ಮುನ್ನ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ದಯನೀಯ ಸ್ಥಿತಿಯಲ್ಲಿದ್ದ ಫೋಟೋ ರಿವೀಲ್ ಆಗಿದೆ. ನನ್ನನ್ನು ಬಿಟ್ಟುಬಿಡಿ ಅಂತ ಪ್ರಾಣಭಿಕ್ಷೆ ಬೇಡುತ್ತಿರುವ ಫೋಟೋ ಲಭ್ಯವಾಗಿದೆ.
ಬಡಕಲು ದೇಹದ ರೇಣುಕಾಸ್ವಾಮಿ ಕಣ್ಣೀರಿಡುತ್ತ, ಗೋಗರೆಯುತ್ತಿರುವ ಸ್ಥಿತಿಯ ಫೋಟೋ ರಿವೀಲ್ ಆಗಿದೆ. ಈ ಬೆನ್ನಲ್ಲೇ ಮಗನ ದಯನೀಯ ಸ್ಥಿತಿಯನ್ನು ಕಂಡು, ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ್ರು ಕಣ್ಣೀರಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿರುವ ಅವರು, ಮಗನನ್ನ ಕಳೆದುಕೊಂಡಿದ್ದೇವೆ, ಅವನ ಸುದ್ದಿ ಕೇಳಿ.. ಕೇಳಿ.. ನಾವೂ ಸಹ ಜೀವಂತ ಹೆಣ ಆಗಿಬಿಟ್ಟಿದ್ದೇವೆ. ಏನು ಹೇಳ್ಬೇಕು ಗೊತ್ತಾಗುತ್ತಿಲ್ಲ. ನನ್ನ ಮಗನಿಗೆ ಒಡೆಯುವಾಗ ಅಷ್ಟು ಜನರಲ್ಲಿ ಒಬ್ಬರಿಗೂ ಮಾನವೀಯತೆ ಇರಲಿಲ್ವಾ? ನನ್ನ ಮಗ ಕಿರುಚಾಡಿ, ಕೂಗಾಡಿದ್ರೂ ಅವರಿಗೆ ಕರುಳು ಚುರುಕ್ ಅನ್ನಲಿಲ್ವಾ? ಎಷ್ಟು ರಾಕ್ಷಸಿ ಮನೋಭಾವ ಇರಬೇಕು. ಇಡೀ ಪ್ರಪಂಚದಲ್ಲೇ ಇಂತಹ ಘಟನೆ ನಡೆದಿಲ್ಲ ಅನ್ನಿಸುತ್ತೆ ಎಂದು ಕಣ್ಣೀರಿಟ್ಟಿದ್ದಾರೆ.

ನನಗಂತೂ ಕರುಳು ಕಿತ್ತುಬರುತ್ತಿದೆ, ಆ ದೇವರೇ ಅವರಿಗೆ ತಕ್ಕ ಪಾಠ ಕಲಿಸಬೇಕು. ಅವರು ಎಂತಹ ವಾತಾವರಣದಲ್ಲಿ ಬೆಳೆದಿರಬಹುದು, ಎಷ್ಟು ಕೆಟ್ಟದ್ದಾಗಿ ವರ್ತಿಸಿದ್ದಾರೆ? ಏನ್ ಹೇಳಬೇಕು ಗೊತ್ತಾಗುತ್ತಿಲ್ಲ. ಮೊದಲೇ ನನಗೆ ಆರೋಗ್ಯ ಸರಿಯಿಲ್ಲ, ಕುಟುಂಬದಲ್ಲಿ ನೆಮ್ಮದಿಯಿಲ್ಲ. ಈಗ ನನ್ನ ಸೊಸೆಗೆ ಏನು ಹೇಳಲಿ? ಎಂದು ಭಾವುಕರಾಗಿದ್ದಾರೆ.
ಮಾಧ್ಯಗಳು ಈ ವಿಷಯವನ್ನು ಬಿತ್ತರ ಮಾಡಿ, ಸತ್ಯ ಬಯಲಿಗೆಳೆಯುತ್ತಿವೆ, ಅದಕ್ಕೆ ಧನ್ಯವಾದ ಹೇಳ್ತೀನಿ. ಆದ್ರೆ ಆ ಪಾಪಿಗಳಿಗೆ ಯಾವ ರೀತಿ ಶಿಕ್ಷೆ ಕೊಡಬೇಕು ಅನ್ನೋದನ್ನ ಸರ್ಕಾರ, ನ್ಯಾಯಾಂಗ ತೀರ್ಮಾನಿಸಬೇಕು. ಆ ನೋವು ಅವರಿಗೂ ಗೊತ್ತಾಗಬೇಕು. ದರ್ಶನ್ ಅಭಿಮಾನಿಗಳು ಅವರ ಮನಸ್ಥಿತಿ ಕಂಡು ಈಗಲಾದ್ರೂ ಎಚ್ಚೆತ್ತುಕೊಳ್ಳಬೇಕು ಅಂತ ಮನವಿ ಮಾಡಿದ್ದಾರೆ.
ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ