15 ನಿಮಿಷಗಳಲ್ಲಿ ದೃಷ್ಟಿ ಸರಿಪಡಿಸುವ ಕಣ್ಣಿನ ಡ್ರಾಪ್‌ ಗೆ ಅನುಮೋದನೆ ನೀಡಿದ ಡಿಸಿಜಿಐ

ನವದೆಹಲಿ: ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ (DCGI) ಎಂಟಾಡ್ ಫಾರ್ಮಾಸ್ಯುಟಿಕಲ್ಸ್‌ನ ʼಪ್ರೆಸ್‌ವುʼ ಹೆಸರಿನ ಕಣ್ಣಿನ ಡ್ರಾಪ್‌ ಅನ್ನು ಅನುಮೋದಿಸಿದೆ. ಇದು ಪ್ರೆಸ್‌ಬಯೋಪಿಯಾ ಚಿಕಿತ್ಸೆಯಲ್ಲಿ ಒಂದು ಪ್ರಗತಿಯಾಗಿದೆ ಎಂದು ಹೇಳಲಾಗುತ್ತದೆ.
ಔಷಧ ಕಂಪನಿಯು ಈಗಾಗಲೇ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನ ವಿಷಯ ತಜ್ಞರ ಸಮಿತಿಯಿಂದ ಕಣ್ಣಿನ ಡ್ರಾಪ್‌ಗೆ ಅನುಮೋದನೆ ಪಡೆದಿದೆ.

ಪ್ರೆಸ್‌ವು (PresVu) ಈ ತರಹದ ಭಾರತದ ಮೊದಲ ಕಣ್ಣಿನ ಡ್ರಾಪ್ ಆಗಿದೆ, ಇದನ್ನು ವಿಶೇಷವಾಗಿ ಕನ್ನಡಕ ಹಾಕಿಕೊಂಡು ಓದಲೇ ಬೇಕಾದ ಅನಿವಾರ್ಯತೆ ತಂದೊಡ್ಡುವ ಪ್ರೆಸ್‌ಬಯೋಪಿಯಾದಿಂದ ಬಳಲುತ್ತಿರುವ ವ್ಯಕ್ತಿಗಳಿಗಾಗಿ ತಯಾರಿಸಲಾಗುತ್ತಿದೆ.
ಪ್ರೆಸ್‌ಬಯೋಪಿಯಾ ಎಂದರೇನು?
ಪ್ರೆಸ್ಬಯೋಪಿಯಾ ಎನ್ನುವುದು ವಯಸ್ಸಿಗೆ ಸಂಬಂಧಿಸಿದ ಸ್ಥಿತಿಯಾಗಿದ್ದು ಅದರಿಂದ ವ್ಯಕ್ತಿಗಳಿಗೆ ಹತ್ತಿರದ ವಸ್ತುಗಳ ಮೇಲೆ ಕೇಂದ್ರೀಕರಿಸಲು ಕಷ್ಟವಾಗುತ್ತದೆ. ಸಾಮಾನ್ಯವಾಗಿ, 40 ವರ್ಷಕ್ಕಿಂತ ಮೇಲ್ಪಟ್ಟವರು ಈ ಕಾಯಿಲೆಯಿಂದ ಬಳಲುತ್ತಾರೆ. ಒಂದು ವರದಿಯ ಪ್ರಕಾರ, ಜಾಗತಿಕವಾಗಿ 1.09 ಶತಕೋಟಿಯಿಂದ 1.80 ಶತಕೋಟಿ ಜನರು ಪ್ರೆಸ್ಬಯೋಪಿಯಾದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.
ಪ್ರೆಸ್ಬಯೋಪಿಯಾ ವಯಸ್ಸಾದಂತೆ ಸ್ವಾಭಾವಿಕವಾಗಿ ಸಂಭವಿಸುತ್ತದೆ, ಏಕೆಂದರೆ ಕಣ್ಣಿನ ಕೇಂದ್ರೀಕರಿಸುವ ಸಾಮರ್ಥ್ಯವು ಕ್ಷೀಣಿಸುತ್ತದೆ. ಈ ಸ್ಥಿತಿಯು ವ್ಯಕ್ತಿಯ ದೈನಂದಿನ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಕಣ್ಣುಗಳ ಸರಳ ಪರೀಕ್ಷೆಯಿಂದ ಇದನ್ನು ಕಂಡುಹಿಡಿಯಬಹುದು.

ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಸಿಇಒ ನಿಖಿಲ್ ಕೆ ಮಸುರ್ಕರ್ ಅವರು ಒಂದು ಹನಿಯ ಪರಿಣಾಮವು 15 ನಿಮಿಷಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು 6 ಗಂಟೆಗಳವರೆಗೆ ಇರುತ್ತದೆ. ಇದಲ್ಲದೆ, ಎರಡನೆಯ ಡ್ರಾಪ್ ಅನ್ನು ಮೊದಲನೆಯ 3 ಗಂಟೆಗಳ ಒಳಗೆ ಬಳಸಿದರೆ, ಪರಿಣಾಮವು ಹೆಚ್ಚು ಕಾಲ ಉಳಿಯಬಹುದು ಎಂದು ಹೇಳಿದ್ದಾರೆ. “ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಪ್ರೆಸ್‌ವು (PresVu) ಅನ್ನು ತಯಾರಿಸಲಾಗಿದೆ. ಡಿಸಿಜಿಐ (DCGI) ಅನುಮೋದನೆಯು ಭಾರತದಲ್ಲಿ ಕಣ್ಣಿನ ಆರೈಕೆಯಲ್ಲಿ ಬದಲಾವಣೆ ತರುವ ನಮ್ಮ ಮಿಷನ್‌ನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ

Leave a Reply

Your email address will not be published. Required fields are marked *