ಬಿಜೆಪಿ ಸೇರ್ಪಡೆಯಾಗುವ ವದಂತಿ ಮಧ್ಯೆ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೇನ್‌ ಮಾರ್ಮಿಕ 

ನವದೆಹಲಿ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಚಂಪೈ ಸೊರೇನ್‌ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿಗಳ ನಡುವೆ ತಾನು ಸಂಪೂರ್ಣ ಜೀವನವನ್ನು ಸಮರ್ಪಿಸಿಕೊಂಡ ಪಕ್ಷದಲ್ಲಿ ನನಗೆ ಅಸ್ತಿತ್ವವಿಲ್ಲ ಎಂಬ ಭಾವನೆ ಬರುವಂತಾಗಿದೆ ಹಾಗೂ ತನಗೆ ಪರ್ಯಾಯ ಮಾರ್ಗಹುಡುಕುವ ಅನಿವಾರ್ಯತೆ ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.
ಜಾರ್ಖಂಡ್ ವಿಧಾನಸಭೆ ಚುನಾವಣೆಗೂ ಮುನ್ನ ಚಂಪೈ ಸೊರೇನ್‌ ಅವರ ಈ ಹೇಳಿಕೆಯನ್ನು ಅವರು ಮತ್ತೊಂದು ಪಕ್ಷ ಸೇರುವ ಸುಳಿವು ಎಂದು ವಿಶ್ಲೇಷಿಸಲಾಗುತ್ತಿದೆ. ಚಂಪೈ ಸೊರೇನ್‌ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳ ನಡುವೆ ದೆಹಲಿ ತಲುಪಿದ ಕೆಲವೇ ಗಂಟೆಗಳ ನಂತರ ಅವರ ಹೇಳಿಕೆ ಹೊರಬಿದ್ದಿದೆ.
‘ಮುಖ್ಯಮಂತ್ರಿಯಾಗಿ ಕಹಿ ಅವಮಾನ ಅನುಭವಿಸಿದ್ದೇನೆ’
ಎಕ್ಸ್‌ನಲ್ಲಿ ಹಿಂದಿಯಲ್ಲಿ ಸುದೀರ್ಘ ಪೋಸ್ಟ್‌ನಲ್ಲಿ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ತಾನು ಮುಖ್ಯಮಂತ್ರಿಯಾಗಿ ಕಹಿ ಅವಮಾನವನ್ನು ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ. ಜುಲೈ 3 ರಂದು ತನ್ನ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಪಕ್ಷದ ನಾಯಕತ್ವವು ತನಗೆ ತಿಳಿಯದೆ ರದ್ದುಗೊಳಿಸಿದೆ ಎಂದು ಅವರು ಹೇಳಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿಯ ಕಾರ್ಯಕ್ರಮಗಳನ್ನು ಮತ್ತೊಬ್ಬರು ರದ್ದುಗೊಳಿಸುವುದಕ್ಕಿಂತ ಅವಮಾನಕರವಾದದ್ದು ಮತ್ತೇನಿದೆ? ಅಪಮಾನದ ಈ ಕಹಿ ಮಾತ್ರೆ ನುಂಗಿದರೂ ಬೆಳಗ್ಗೆಯೇ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮವದ್ದು, ಮಧ್ಯಾಹ್ನ ಶಾಸಕಾಂಗ ಪಕ್ಷದ ಸಭೆ ನಡೆಯುವುದರಿಂದ ಹಾಜರಾಗುತ್ತೇನೆ ಎಂದಿದ್ದೆ. ಆದರೆ, ಅಲ್ಲಿಂದ ಸಾರಾಸಗಟಾಗಿ ನನ್ನನ್ನು ನಿರಾಕರಿಸಲಾಯಿತು ಎಂದು ಚಂಪೈ ಸೊರೇನ್‌ ಹೇಳಿದ್ದಾರೆ.

‘ನನ್ನ ಆತ್ಮಗೌರವಕ್ಕೆ ಧಕ್ಕೆ’
“ಕಳೆದ ನಾಲ್ಕು ದಶಕಗಳ ನನ್ನ ನಿಷ್ಕಳಂಕ ರಾಜಕೀಯ ಪಯಣದಲ್ಲಿ ಮೊದಲ ಬಾರಿಗೆ ನಾನು ಒಳಗಿನಿಂದ ನೋವನುಭವಿಸಿದೆ. ಏನು ಮಾಡಬೇಕೆಂದು ನನಗೆ ಅರ್ಥವಾಗಲಿಲ್ಲ. ಎರಡು ದಿನಗಳ ಕಾಲ ನಾನು ಶಾಂತವಾಗಿ ಕುಳಿತು ಆತ್ಮಾವಲೋಕನ ಮಾಡಿಕೊಂಡೆ, ಇಡೀ ಘಟನೆಯಲ್ಲಿ ನನ್ನ ತಪ್ಪನ್ನು ಹುಡುಕುತ್ತಲೇ ಇದ್ದೆ. ನನಗೆ ಅಧಿಕಾರದ ದುರಾಸೆ ಸ್ವಲ್ಪವೂ ಇರಲಿಲ್ಲ, ಆದರೆ ನನ್ನ ಸ್ವಾಭಿಮಾನಕ್ಕೆ ಬಿದ್ದ ಈ ಹೊಡೆತವನ್ನು ಯಾರಿಗೆ ತೋರಿಸಲಿ? ನನ್ನ ಸ್ವಂತ ಜನರಿಂದ ಅನುಭವಿಸಿದ ನೋವನ್ನು ನಾನು ಎಲ್ಲಿ ಹೇಳಲಿ ಎಂದು ಜಾರ್ಖಂಡ ಮಾಜಿ ಮುಖ್ಯಮಂತ್ರಿ ಸಾಮಾಜಿಕ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಹೇಮಂತ ಸೊರೇನ್‌ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಿದಾಗ ಅವರು “ಸ್ವಾಭಿಮಾನಕ್ಕೆ ದೊಡ್ಡ ಹೊಡೆತ” ನೀಡಿದರು. ಮುಖ್ಯಮಂತ್ರಿ ಹೇಮಂತ ಸೊರೇನ್‌ ಜೈಲಿನಿಂದ ಹೊರಬಂದ ನಂತರ ಶಾಸಕರು ಮತ್ತು ಇತರ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯ ಕಾರ್ಯಸೂಚಿಯ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ.


”ಶಾಸಕಾಂಗ ಪಕ್ಷದ ಸಭೆ ಕರೆಯುವ ಹಕ್ಕು ಮುಖ್ಯಮಂತ್ರಿಗೆ ಇದೆ, ಆದರೆ ಸಭೆಯ ಅಜೆಂಡಾವನ್ನೂ ನನಗೆ ಹೇಳಿಲ್ಲ, ಸಭೆಯ ವೇಳೆ ರಾಜೀನಾಮೆ ನೀಡುವಂತೆ ಹೇಳಿದ್ದು, ಅಚ್ಚರಿಯಾದರೂ ನನಗೆ ಅಧಿಕಾರದ ಆಸೆ ಇರಲಿಲ್ಲ. ಹಾಗಾಗಿ ನಾನು ತಕ್ಷಣವೇ ರಾಜೀನಾಮೆ ನೀಡಿದ್ದೇನೆ, ಆದರೆ ನನ್ನ ಆತ್ಮಗೌರವಕ್ಕೆ ಹಾನಿಯಾದ ಕಾರಣ ನನ್ನ ಹೃದಯವು ಭಾವುಕವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ

Leave a Reply

Your email address will not be published. Required fields are marked *