ರಾಜ್ಯದ ಹಣಕಾಸು ವ್ಯವಸ್ಥೆ ಮೇಲುಸ್ತುವಾರಿಗೆ ವಿದೇಶಿ ಕನ್ಸಲ್ಟೆಂನ್ಸಿ ಸಲಹೆ ಪಡೆಯಲು ಮುಂದಾಗಿರುವುದು ನಮೆಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ. 14 ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗೆ ಹಣಕಾಸು ಇಲಾಖೆ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಹೇಗೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕರ್ನಾಟಕ ಇಂದು ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದ್ದು, ರೈತರು, ಕೂಲಿಕಾರ್ಮಿಕರು, ದೀನದಲಿತರು, ಬಡವರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಬರೀ ಗ್ಯಾರಂಟಿಗಳ ಡಂಗೂರ ಸಾರಲಾಗುತ್ತಿದೆ. ಅಭಿವೃದ್ಧಿ ಕಾರ್ಯ ಸಂಪೂರ್ಣವಾಗಿ ಸ್ಥಗಿತವಾಗಿದ್ದು, ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳಿಗೆ ನಯಾಪೈಸಾ ಹಣ ಬಿಡುಗಡೆಯಾಗುತ್ತಿಲ್ಲ. ಆರ್ಥಿಕ ಪರಿಸ್ಥಿತಿ ದಿವಾಳಿ ಹಂತಕ್ಕೆ ತಲುಪಿದೆ . ಮುಖ್ಯಮಂತ್ರಿಗಳ ಸುತ್ತಮುತ್ತ ಅನೇಕ ಅಧಿಕಾರಿಗಳು ಇದ್ದಾರೆ. ಅಷ್ಟೇಲ್ಲ ಇರುವಾಗ ವಿದೇಶಿ ಕನ್ಸಲ್ಟೆನ್ಸಿ ನೇಮಕ ಮಾಡಿಕೊಳ್ಳಲು ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ? ಎಲ್ಲ ರಂಗಗಳಲ್ಲೂ ವಿಫಲವಾಗಿರುವ ಸರ್ಕಾರ ಜನರ ಪಾಲಿಗೆ ಇದ್ದು ಸತ್ತಂತಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:– ಜೈಲಿನಿಂದ ಬಿಡುಗಡೆಗೆ ಹೈಕೋರ್ಟ್ ತಡೆ -ಕೇಜ್ರಿವಾಲ್ ಗೆ ನಿರಾಸೆ

ರಾಜ್ಯದಲ್ಲೇ ಅನೇಕ ಐಎಎಸ್ ಅಧಿಕಾರಿಗಳು ಇದ್ದಾರೆ. ಆರ್ಥಿಕ ತಜ್ಞರಿಗೂ ಕೊರತೆ ಇಲ್ಲ. ಒಬ್ಬ ಸೂಕ್ತ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದರೆ ಹೇಗೆ? ಯಡಿಯೂರಪ್ಪ, ಎಸ್.ಎಂ.ಕೃಷ್ಣ ಸೇರಿದಂತೆ ಅನೇಕರು ಅಧಿಕಾರದಲ್ಲಿದ್ದಾಗ ಕರ್ನಾಟಕ ಎಲ್ಲಾ ರಂಗಗಳಲ್ಲೂ ಮುಂದಿತ್ತು. ಈಗ ಹಿನ್ನಡೆ ಅನುಭವಿಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಅಭಿವೃದ್ದಿಶೀಲ ರಾಜ್ಯ ಮಾಡಬೇಕೆಂಬ ಇಚ್ಛೆ ಇದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು. ಇವರ ಕಿತ್ತಾಟದಿಂದ ಬಂಡವಾಳ ಹೂಡುವವರು ಕರ್ನಾಟಕಕ್ಕೆ ಬರುತ್ತಿಲ್ಲ. ನಿಮ ಆಂತರಿಕ ಕಚ್ಚಾಟದಿಂದ ಕರ್ನಾಟಕವನ್ನು ಹಿಂದುಳಿದ ರಾಜ್ಯ ಮಾಡಬೇಡಿ ಎಂದು ಬಿ.ವೈ.ವಿಜಯೇಂದ್ರ ಮನವಿ ಮಾಡಿದ್ದಾರೆ.
ಇದನ್ನೂ ಓದಿ:– ಹೆಚ್ಡಿಕೆ ವಿರುದ್ಧ ನಟ ದರ್ಶನ್ ಮಹಿಳಾ ಅಭಿಮಾನಿ ನಿಂದನೆ – ದೂರು ದಾಖಲು