ರಾಜಕೀಯ ಅಂತ್ಯ ಜನ ತೀರ್ಮಾನಿಸುತ್ತಾರೆ

ಬೆಂಗಳೂರು :ಯಾವುದೇ ರಾಜಕಾರಣಿಗಳ ರಾಜಕೀಯ ಅಂತ್ಯ ತೀರ್ಮಾನ ಜನರು ಮಾಡುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.
ವಿಧಾನಸೌಧದ ಮುಂಭಾಗದಲ್ಲಿಂದು ನಡೆದ ಅಂತಾರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ರಾಜಕೀಯ ಅಂತ್ಯ ತೀರ್ಮಾನ ಮಾಡುವರು ಜನರು. ಬೇರೆ ಯಾರೂ ಅಲ್ಲ ಜನರೇ ನನ್ನ ಹಿಂದಿರುವ ಶಕ್ತಿ ಎಂದರು.
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್ ಸ್ಪರ್ಧಿಸಿದರೆ ಅಲ್ಲಿಗೆ ಅವರ ರಾಜಕೀಯ ಅಂತ್ಯವಾಗುತ್ತದೆ ಎಂಬ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು,ಎಲ್ಲವನ್ನೂ ಜನ ತೀರ್ಮಾನಿಸುತ್ತಾರೆ. ಯೋಗೇಶ್ವರ್ ಅವರ ದೊಡ್ಡವರು. ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಎಲ್ಲವೂ ಜನರ ಕೈಯಲ್ಲಿದೆ ಎಂದರು.
ನಾನು ರಾಮನಗರದವನು. ಚನ್ನಪಟ್ಟಣ ಜನರ ಮೇಲೆ ನನಗೆ ನಂಬಿಕೆ ಇದೆ. ಅವರ ಋಣ ತೀರಿಸಬೇಕಿದೆ. ಹಾಗಾಗಿ. ನನಗೆ ಶಕ್ತಿ ಕೊಡಿ ಎಂದು ಕೇಳಿದ್ದೇನೆ. ನಮ್ಮ ಮೇಲೆ ವಿಶ್ವಾಸವಿದ್ದರೆ ನನಗೆ ಶಕ್ತಿ ಕೊಡುತ್ತಾರೆ ಎಂದರು.

ಸ್ವಪ್ರತಿಷ್ಠೆಗಾಗಿ ದೇಶದ ಸಂಪತ್ತನ್ನು ಹಾಳು ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರೊಬ್ಬರ ಹೇಳಿಕೆಗೆ ಉತ್ತರಿಸಿದ ಅವರು, ಚನ್ನಪಟ್ಟಣ ಉಪಚುನಾವಣೆ ನಡೆದರೆ ಕನಕಪುರದಲ್ಲಿ ಏಕೆ ಉಪಚುನಾವಣೆ ನಡೆಯುತ್ತದೆ.
ಕನಕಪುರದ ಶಾಸಕನಾಗಿ,ಕಾಂಗ್ರೆಸ್ ಅಧ್ಯಕ್ಷನಾಗಿ.ಉಪಮುಖ್ಯಮಂತ್ರಿಯಾಗಿ ನನಗೆ ಜವಾಬ್ದಾರಿ ಇದೆ. ಉಪಚುನಾವಣೆಯಲ್ಲಿ ನನ್ನದೇ ನಾಯಕತ್ವ.ನನ್ನದೇ ಮುಖಂಡತ್ವ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಜತೆಗೂಡಿ ಉಪಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ.ಜನ ಎಲ್ಲವನ್ನೂ ನಿರ್ಧರಿಸುತ್ತಾರೆ ಎಂದರು.
ಯೋಗ ಶಿಕ್ಷಣ
ಯೋಗ ಆರೋಗ್ಯಕ್ಕೆ ಒಳ್ಳೆಯದು, ಯೋಗ ನಮ್ಮ ಸಂಸ್ಕೃತಿಯ ಭಾಗ, ೫ ಸಾವಿರ ವರ್ಷಗಳಿಂದ ವಿಶ್ವಕ್ಕೆ ಯೋಗವನ್ನು ಹಂಚಿದ್ದೇವೆ. ಯೋಗಕ್ಕೆ ಹೆಚ್ಚು ಪ್ರಚಾರದ ಅಗತ್ಯವಿದೆ. ಶಾಲಾ-ಕಾಲೇಜುಗಳಲ್ಲೂ ಯೋಗ ಶಿಕ್ಷಣ ನೀಡುವ ಬಗ್ಗೆ ರೂಪು ರೇಷೆಗಳನ್ನು ತೀರ್ಮಾನ ಮಾಡುತ್ತೇವೆ ಎಂದರು.ಈ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *