ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದಿದ್ದಾರೆ. ಸಿಎಂ ಹಾಗೂ ಡಿಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಾಥ್ ನೀಡಿದರು. ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ನಾಯಕರು ನಂತರ ರಸ್ತೆ ಮಾರ್ಗದ ಮೂಲಕ ಮಂಜುನಾಥನ ಸನ್ನಿಧಿಗೆ ಆಗಮಿಸಿದರು.

ಧರ್ಮಸ್ಥಳದ ಪ್ರವೇಶ ದ್ವಾರದಲ್ಲಿ ವಾದ್ಯ ಘೋಷಗಳ ಜೊತೆಗೆ ಸಿಎಂ ಹಾಗೂ ಡಿಕೆಶಿಗೆ ಭವ್ಯ ಸ್ವಾಗತ ಕೋರಲಾಯಿತು. ಸಂಜೆ ಮಂಗಳೂರು ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿಎಂ, ಡಿಸಿಎಂ ಅದಕ್ಕೂ ಮೊದಲು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಗ್ಯಾರಂಟಿ ಯೋಜನೆ ಸಕ್ಸೆಸ್ ಆದ ಹಿನ್ನೆಲೆ ಮಂಜುನಾಥೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನ ಪಡೆದ ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನ ಭೇಟಿ ಮಾಡಿದರು. ಈ ವೇಳೆ ಧರ್ಮಾಧಿಕಾರಿ ಹೆಗ್ಗಡೆಯವರ ಕಾಲಿಗೆ ಬಿದ್ದು ಡಿಕೆ. ಶಿವಕುಮಾರ್ ಆಶೀರ್ವಾದ ಪಡೆದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಪ್ರವೇಶಿಸುತ್ತಿದ್ದಂತೆ ಸಾಲುಗಟ್ಟಿ ನಿಂತ ಸಾವಿರಾರು ಭಕ್ತರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಕ್ಷೇತ್ರಕ್ಕೆ ಸಿಎಂ ಆಗಮನ ಹಿನ್ನೆಲೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅರ್ಧ ಗಂಟೆಯಿಂದ ದರ್ಶನಕ್ಕೆ ನಿರ್ಬಂಧಿಸಲಾಗಿತ್ತು. ತಾಸುಗಟ್ಟಲೇ ಕಾದರೂ ಸಿಎಂ ಡಿಸಿಎಂ ಆಗಮಿಸದ ಹಿನ್ನೆಲೆ ಸಿಎಂ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೂ ಸಿಎಂ ಆಗಮಿಸುತ್ತಿದ್ದಂತೆ ಪ್ರವೇಶ ದ್ವಾರದಲ್ಲಿ ಜೈಶ್ರೀರಾಮ್ ಎಂದು ಭಕ್ತರು ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ : – ಸಂಸದ ಪ್ರಜ್ವಲ್ ರನ್ನು ಸ್ವದೇಶಕ್ಕೆ ಕರೆತರಲು ಕಸರತ್ತು