ಬೆಳಗಾವಿ: ಹುಬ್ಬಳ್ಳಿಯಲ್ಲಿ ನೇಹಾ, ಅಂಜಲಿ ಕೊಲೆ ಪ್ರಕರಣದ ನಂತರವೂ ಪಾಗಲ್ ಪ್ರೇಮಿಗಳ ಕಾಟ ತಪ್ಪಿಲ್ಲ. ಇದೀಗ ಬೆಳಗಾವಿಯಲ್ಲೊಬ್ಬ ಸೈಕೋಪಾತ್ ಕಾಣಿಸಿಕೊಂಡಿದ್ದಾನೆ. ಬೆಳಗಾವಿ ತಾಲೂಕಿನ ಕಿಣೈ ಗ್ರಾಮದ ತಿಪ್ಪಣ್ಣ ಡೋಕರೆ (27) ಎಂಬ ಪಾಗಲ್ ಪ್ರೇಮಿಯ ಕಾಟದಿಂದ ಯುವತಿ ಕುಟುಂಬ ಕಂಗಾಲಾಗಿದೆ. ಯುವತಿ ಅದೇ ಗ್ರಾಮದ ಕಿಣೈಯಲ್ಲಿರುವ ಮನೆಯಲ್ಲಿ ತಾಯಿ ಜೊತೆಗೆ ವಾಸವಿದ್ದಾಳೆ.

ಬಿಕಾಂ ಓದುತ್ತಿರುವ ಈಕೆ ನಿತ್ಯ ಕಾಲೇಜಿಗೆ ಹೋಗುವಾಗಲೇ ಫಾಲೋ ಮಾಡಿ ತಿಪ್ಪಣ್ಣ ರೇಗಿಸುತ್ತಿದ್ದನು. ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆ ಮೇಲೆಯೇ ಕಲ್ಲು ತೂರಿ ನೇಹಾಳಂತೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಪಾಗಲ್ ಪ್ರೇಮಿ ಕಾಟದಿಂದ ಯುವತಿ ಕಾಲೇಜಿಗೆ ಹೋಗುವುದನ್ನೇ ಬಿಟ್ಟಿದ್ದಾಳೆ. ಪ್ರೀತಿಸು, ಮದುವೆ ಆಗೆಂದು ಕಳೆದ ಮೂರು ವರ್ಷಗಳಿಂದ ಡೋಕರೆ ಪೀಡಿಸುತ್ತಿದ್ದಾನೆ. ಮದುವೆ ಮಾಡಿಕೊಡದಿದ್ದರೆ ಹತ್ಯೆಗೈಯ್ಯುವುದಾಗಿ ಯುವತಿ ಹಾಗೂ ತಾಯಿಗೆ ತಿಪ್ಪಣ್ಣ ಬೆದರಿಕೆ ಹಾಕಿದ್ದಾನೆ.