ಬೆಂಗಳೂರು;ಬಿಎಂಟಿಸಿಯ ಇವಿ ಬಸ್ನಲ್ಲ್ಲಿ ಕೇರಳದವರಿಗೆ ಉದ್ಯೋಗ ನೀಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರ ಮುಂದುವರೆದಿದ್ದು, ಸಿದ್ದರಾಮಯ್ಯನವರೇ ಅಹಂಕಾರದ ಮಾತುಗಳಿಂದ ನಮ್ಮ ಬಾಯಿ ಮುಚ್ಚಿಸಲಾಗದು ಎಂದು ಅಶೋಕ್ ತಿರುಗೇಟು ನೀಡಿದ್ದಾರೆ.
ಬಿಎಂಟಿಸಿ ಇವಿ ಬಸ್ನಲ್ಲಿ ಕೇರಳದವರಿಗೆ ಉದ್ಯೋಗ ನೀಡಲಾಗಿದೆ ಎಂಬ ವಿಪಕ್ಷ ನಾಯಕರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಟ್ವೀಟ್ ಮಾಡಿ ವಿರೋಧ ಪಕ್ಷದ ನಾಯಕರೇ ನಿಮ್ಮ ಪರಮ ಅಜ್ಞಾನದ ಫಲವೋ ಅಥವಾ ವಿರೋಧ ಪಕ್ಷದ ನಾಯಕ ಅಸ್ತಿತ್ವದಲ್ಲಿದ್ದಾರೆ ಎಂದು ಜನರಿಗೆ ತಿಳಿಸಲು ಟ್ವೀಟ್ ಮಾಡುತ್ತೀರೋ ನಿಮ್ಮ ಸುಳ್ಳಿನ ಕೋಟೆಯನ್ನು ಎಷ್ಟೇ ದೊಡ್ಡದಾಗಿ ಕಟ್ಟಿದರೂ ಅದರ ಆಯುಷ್ಯ ಕಡಿಮೆ.

ಮತ್ತೆ ಮತ್ತೆ ಸುಳ್ಳು ಹೇಳಿ ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ ಇದು ಮುಂದುವರೆಯಲಿ ಆಲ್ ದಿ ಬೆಸ್ಟ್ ಎಂದು ಸಿದ್ದರಾಮಯ್ಯರವರು ಟ್ವೀಟ್ ಮಾಡಿರುವುದಕ್ಕೆ ಇಂದು ಟ್ವೀಟ್ನಲ್ಲಿ ತಿರುಗೇಟು ನೀಡಿರುವ ಆರ್. ಅಶೋಕ್, ಸಿಎಂ ಸಿದ್ದರಾಮಯ್ಯರವರೇ ನಿಮ್ಮ ಟ್ವೀಟ್ ನಾಚಿಕೆಗೇಡಿನತದ ಪರಮಾವಧಿಯೋ ಅಥವಾ ನಾನಿನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದೇನೆ ಎಂದು ತೋರಿಸುವ ಅನಿವಾರ್ಯತೆಯೋ ಅರ್ಥವಾಗುತ್ತಿಲ್ಲ. ನಿಮ್ಮ ರೀತಿಯ ಅಹಂಕಾರದ ಮಾತುಗಳು ನನಗೆ ಬರುವುದಿಲ್ಲ, ಅದು ನನಗೆ ಬೇಡವೂ ಬೇಡ ಎಂದಿದ್ದಾರೆ.
ಜೂ. ೪ ರ ನಂತರ ಯಾರು ಯಾರಿಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಾರೆ ಬಡಿಗೆಯಿಂದ ಹೊಡೆದು ಯಾರು ಯಾರನ್ನು ಕುರ್ಚಿಯಿಂದ ಕೆಳಗಿಳಿಸುತ್ತಾರೆ ನೋಡೋಣ ಎಂದು ಟ್ವೀಟ್ ಮಾಡಿದ್ದಾರೆ. ತಾವು ಅಪರೂಪಕ್ಕೆ ತಮ್ಮ ಪ್ರಕಾರ ನಿದ್ದೆಯಿಂದ ಎದ್ದು ನನ್ನ ಟೀಕೆಗೆ ಉತ್ತರ ನೀಡುವ ಶ್ರಮ ತೆಗೆದುಕೊಂಡಿದ್ದೀರಿ. ಅದಕ್ಕೆ ಅಭಿನಂದನೆಗಳು ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.
ನಿಮಗೆ ನಿಜವಾಗಿಯೂ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎನ್ನುವ ಬದ್ಧತೆ ಇದ್ದಿದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡಿಕೊಡಬಹುದಿತ್ತು. ಎಲ್ಲದ್ದಕ್ಕೂ ಕೇಂದ್ರವನ್ನು ದೂಷಿಸುವ, ಕೇಂದ್ರಕ್ಕೆ ಪತ್ರ ಬರೆಯುವ ತಾವು ಈ ವಿಚಾರದಲ್ಲಿ ಮಾತ್ರ ಏಕೆ ಪತ್ರ ಬರೆಯಲಿಲ್ಲ ಎಂದು ಪ್ರಶ್ನಿಸಿ ೪ ಅಹಂಕಾರದ ಮಾತುಗಳನ್ನು ಆಡಿದ ಮಾತ್ರಕ್ಕೆ ವಿಪಕ್ಷಗಳ ಬಾಯಿ ಮುಚ್ಚಿಸಬಹುದು ಎಂಬುದು ನಿಮ್ಮ ಭ್ರಮೆ ನಿಮ್ಮ ಭ್ರಮಾಲೋಕ ವಾಸ ಮುಂದುವರೆಯಲಿ ಆಲ್ ದಿ ಬೆಸ್ಟ್ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.