ತೂಬಗೆರೆಯಲ್ಲಿ ಗಣೇಶ ಚತುರ್ಥಿ ಸಂಭ್ರಮ  

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಈ ಬಾರಿಯ ಗಣೇಶ ಚತುರ್ಥಿ ಹಬ್ಬವನ್ನು ಯುವ ಸಮೂಹ ಅಂತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಚರಣೆ ಮಾಡಿದರು. ವಿಘ್ನವಿನಾಶಕ ಗಣಪತಿಯನ್ನು ಆರಾಧಿಸುವ ಹಬ್ಬದ ಹಿನ್ನೆಲೆ ಗ್ರಾಮದೆಲ್ಲೆಡೆ ಹರ್ಷಭರಿತ ವಾತಾವರಣ ನಿರ್ಮಾಣವಾಗಿದೆ.  

ಸ್ಥಳೀಯ ಸಂಪ್ರದಾಯದಲ್ಲಿ, ಇತರೆಡೆಗಳಲ್ಲಿ ಕಂಡುಬರುವಂತೆ ಮನೆಮನೆಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಯ ಬದಲಾಗಿ ಇಲ್ಲಿ ಮುಖ್ಯವಾಗಿ ಸಾರ್ವಜನಿಕ ಪ್ರತಿಷ್ಠಾಪನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕೆಲವು ಕುಟುಂಬಗಳು ಮಾತ್ರ ವೈಯಕ್ತಿಕ ಮಟ್ಟದಲ್ಲಿ ಗಣಪತಿ ಮೂರ್ತಿಗಳನ್ನು ಸ್ಥಾಪಿಸುತ್ತಾರೆ. ಉಳಿದವರು ಸಾರ್ವಜನಿಕವಾಗಿ ಸೇರಿ ಹಬ್ಬವನ್ನು ಆಚರಿಸುತ್ತಾರೆ.  

ಈ ಬಾರಿ ವಿವಿಧ ವಿನಾಯಕ ಮಂಡಳಿಗಳ ವತಿಯಿಂದ ಪಟ್ಟಣದಲ್ಲಿ ಹತ್ತಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿಯೊಂದು ಮೂರ್ತಿಯ ಸುತ್ತಲೂ ಆಕರ್ಷಕ ಅಲಂಕಾರ, ದೀಪಾಲಂಕಾರ ಮಾಡಲಾಗಿದೆ.

ವಿಶೇಷವಾಗಿ, ಗ್ರಾಮದ ಚಾವಡಿ ಬಳಿ ಪ್ರತಿಷ್ಠಾಪಿಸಿದ ಗಣೇಶ್ ಮೂರ್ತಿಗೆ ಸಜ್ಜುಗೊಂಡಿರುವ ಅರಮನೆ ಅಂಬಾರಿ ಅಲಂಕಾರ ಗ್ರಾಮೀಣರ ಮನಸೆಳೆಯುತ್ತಿದೆ.
ಕುರುಬರು ಬೀದಿಯಲ್ಲಿ ವಿಷ್ಣು ದಶಾವತಾರ ಸೆಟ್ನಲ್ಲಿ ಪ್ರತಿಷ್ಠಾಪಿಸಿರುವ ಗಣೇಶ, ದೊಡ್ಡಮ್ಮ ದೇವಸ್ಥಾನ ಬಳಿ ಸಿಂಹಾರೂಡ ಗಣೇಶ, ಮಾರುತಿ ವಿನಾಯಕ ಬಳಗದವರು ವಾಮನ ಗಣೇಶ. ತೇರಿನ ಬೀದಿಯ ಮಹಾರಾಜ ಗಣೇಶ  ಹೀಗೆ ಒಂದಕ್ಕೆ ಮೀರಿಸುವಂತೆ ಇನ್ನೊಂದರ ವಿದ್ಯುತ್ ದೀಪ ಅಲಂಕಾರ,  ಪ್ರತಿ ಗಲ್ಲಿ ಗಲ್ಲಿಗಳಲ್ಲೂ  ಗಣಪತಿಗೆ  ಜಯಕಾರ ಕೂಗುತ್ತಿರುವ ಚಿನ್ನರ  ಸಂಭ್ರಮಕ್ಕೆ  ಮಿತಿ ಇಲ್ಲ.

Leave a Reply

Your email address will not be published. Required fields are marked *