ಶ್ರೀಮಂತ ಗಣಪನಿಗೆ ಈ ಬಾರಿ 400 ಕೋಟಿ ರೂ. ವಿಮೆ

ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ವಿಘ್ನೇಶ್ವರನ ಭಕ್ತರು ಬಗೆಬಗೆಯ ಗಣೇಶ ಮೂರ್ತಿಗಳನ್ನ ಕೂರಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸಕಲ ವಿಘ್ನಗಳು ನಿವಾರಣೆಯಾಗಲಿ ವಿನಾಯಕನು ನಂಬಿದ ಭಕ್ತರಿಗೆ ಬುದ್ಧಿ, ಆಯುಷ್ಯ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ದಯಪಾಲಿಸುತ್ತಾನೆ ಎಂಬ ನಂಬಿಕೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡುತ್ತಿದ್ದಾರೆ.

ಗಣೇಶ ಚತುರ್ಥಿ ಹಬ್ಬ ಆಚರಣೆಗೆಂದೇ ದೇಶಾದ್ಯಂತ ನಾನಾ ಕಡೆ ಗಣೇಶ ಮೂರ್ತಿಗಳ ಮಾರಾಟ ನಡೆಯುತ್ತಿದೆ. ಗಲ್ಲಿ-ಗಲ್ಲಿಯಲ್ಲಿ ಗಣೇಶನ ಮೂರ್ತಿ ಕೂರಿಸಿ ಪೂಜೆ ನಡೆಯುತ್ತದೆ. ಬಳಿಕ ವಿಸರ್ಜನೆಯೂ ಅಷ್ಟೇ ವಿಜ್ರಂಭಣೆಯಿಂದ ಆಗುತ್ತದೆ. ಗಣೇಶ ಚತುರ್ಥಿ ಆಚರಣೆ ಮುಂಬೈನಲ್ಲಿ ಭಾರೀ ವಿಶೇಷ. ಮುಂಬೈನಲ್ಲಿ ಹಲವು ದಶಕಗಳಿಂದ ಕೆಲ ಸಂಘಟನೆಗಳು ಗಣೇಶ ಹಬ್ಬ ಆಚರಿಸುತ್ತಾ ಬರುತ್ತಿದೆ. ಈ ಪೈಕಿ ಜಿಎಸ್‌ಬಿ ಸೇವಾ ಮಂಡಲ್ ಕೂಡ ಒಂದು. ಪ್ರತಿ ಬಾರಿಯೂ ಗಣೇಶ್‌ ಮೂರ್ತಿ, ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸುತ್ತಲೇ ಗಮನ ಸೆಳೆಯುವ ಮಂಡಲ್‌ ಈ ಬಾರಿಯೂ ವಿಶ್ವದ ಶ್ರೀಮಂತ ಗಣಪನನ್ನು ಕೂರಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಎಸ್‌ಬಿ ಗಣಪನಿಗೆ ಈ ಬಾರಿ ದಾಖಲೆಯ 400.58 ಕೋಟಿ ರೂ. ವಿಮೆ ಮಾಡಲಾಗಿದೆ. ಆದ್ರೆ ಈ ಗಣೇಶ ಮೂರ್ತಿಯ ಅಧಿಕೃತ ಬೆಲೆ ಎಷ್ಟು ಎಂದು ಮಂಡಲ್‌ ಸುಳಿವು ಬಿಟ್ಟುಕೊಟ್ಟಿಲ್ಲ.

ಮುಂಬೈನ ಜಿಎಸ್‌ಬಿ ಸೇವಾ ಮಂಡಲ ಈ ಬಾರಿ 5 ದಿನಗಳ ಗಣೇಶೋತ್ಸವ ಆಚರಿಸಲಿದೆ. ಸೆಪ್ಟೆಂಬರ್ 7 ರಿಂದ 11ರ ವರೆಗೆ ಅದ್ಧೂರಿಯಾಗಿ ಗಣೇಶೋತ್ಸವ ನಡೆಯಲಿದೆ. ಜಿಎಸ್‌ಬಿ ಗಣೇಶನ ದರ್ಶನ ಪಡೆಯಲು ಈಗಾಗಲೇ ಭಕ್ತರು ಸಜ್ಜಾಗಿದ್ದಾರೆ. ಆದರೆ ಗಣೇಶನ ಅನಾವರಣ ಸೆಪ್ಟೆಂಬರ್ 5 ರಂದು ಜಿಎಸ್‌ಬಿ ಸೇವಾ ಮಂಡಲ ಮಾಡಲಿದೆ. ಜಿಎಸ್‌ಬಿ ಸೇವಾ ಮಂಡಲ್‌ ಪ್ರತಿ ವರ್ಷ ಗಣೇಶೋತ್ಸವಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಈ ಬಾರಿ 70ನೇ ವರ್ಷದ ಗಣೇಶೋತ್ಸವದ ಕಾರಣ ವಿಮೆ ಮೊತ್ತವನ್ನು ಏರಿಸಲಾಗಿದೆ.

ಜಿಎಸ್‌ಬಿ ಮಂಡಲ್‌ ಈ ಬಾರಿ ಗಣೇಶಮೂರ್ತಿಗೆ ಬರೋಬ್ಬರಿ 66 ಕೆಜಿ ಚಿನ್ನ, 325 ಕೆಜಿ ಬೆಳ್ಳಿ ಹಾಗೂ ಇತರ ಅತ್ಯಮೂಲ್ಯ ಚಿನ್ನಾಭರಣಗಳನ್ನು ತೊಡಿಸಲಾಗುತ್ತದೆ. ಹೀಗಾಗಿ ಇದಕ್ಕೆ ಅಷ್ಟೇ ದುಬಾರಿ ಮೊತ್ತದ ವಿಮೆ ಮಾಡಿಸಲಾಗಿದೆ. 400.58 ಕೋಟಿ ರೂ. ವಿಮೆ ಮೊತ್ತಕ್ಕೆ ಪ್ರಿಮಿಯಂ ಎಷ್ಟು ಪಾವತಿ ಮಾಡಲಾಗಿದೆ ಅನ್ನೋ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಕಳೆದ ವರ್ಷ ಇದೇ ರೀ ವೈಭವೋಪೇತ ಗಣೇಶಮೂರ್ತಿಯೊಂದನ್ನ ಸೇವಾ ಮಂಡಲ ಪ್ರತಿಷ್ಠಾಪಿಸಿತ್ತು. ಈ ಗಣೇಶನ ಮೂರ್ತಿಯ ಅಲಂಕಾರಕ್ಕೆ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿ ಬಳಕೆ ಮಾಡಲಾಗಿತ್ತು. ಕಳೆದ ವರ್ಷ 360.40 ಕೋಟಿ ರೂ. ವಿಮೆ ಮಾಡಲಾಗಿತ್ತು. ಈ ಬಾರಿ ಈ ಮೊತ್ತವನ್ನು ಏರಿಕೆ ಮಾಡಲಾಗಿದೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಲಾಗಿದೆ. ಸ್ವಯಂ ಸೇವಕರು, ಕಾರ್ಯಕರ್ತರು ಎಲ್ಲರು ಸಜ್ಜಾಗಿದ್ದಾರೆ. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಾಳ್ಮೆಯಿಂದ ದರ್ಶನ ಮಾಡಬೇಕು. ಯಾವುದೇ ನೂಕು ನುಗ್ಗಲಿಗೆ ಅವಕಾಶವಿಲ್ಲ .

ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ

Leave a Reply

Your email address will not be published. Required fields are marked *