ಮಂಡ್ಯ: ಅತ್ತ ಪರಪ್ಪನ ಅಗ್ರಹಾರದಲ್ಲಿ ದರ್ಶನ್ಗೆ ರಾಜಾತಿಥ್ಯ ನೀಡುತ್ತಿದ್ದರೆ, ಇತ್ತ ಎ5 ಆರೋಪಿ ನಂದೀಶ್ ಕುಟುಂಬ ಜೀವನ ಸಾಗಿಸಲು ಪರದಾಡುತ್ತಿದೆ. ಮಗ ಜೈಲು ಸೇರಿದ ಬಳಿಕ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಇದುವರೆಗೂ ದರ್ಶನ್ ಆಗಲೀ ಅವರ ವಕೀಲರಾಗಲೀ ನಮ್ಮ ಮಗನನ್ನು ಭೇಟಿ ಮಾಡಿಲ್ಲ ಎಂದು ಎ5 ಆರೋಪಿ ನಂದೀಶ್ ತಂದೆ ಶ್ರೀನಿವಾಸಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಮನೆಗಾಗಿ ನಂದೀಶ್ ಮಾಡಿದ್ದ ಸಾಲದ ಹೊರೆ ವಯಸ್ಸಾದ ತಂದೆ, ತಾಯಿ ಹೆಗಲಿಗೆ ಬಂದು ಬಿದ್ದಿದೆ. ಪ್ರತಿ ತಿಂಗಳು 20 ಸಾವಿರ ರೂ. ಕಟ್ಟಲೇ ಬೇಕಾದ ದುಸ್ಥಿತಿ ನಂದೀಶ್ ಕುಟುಂಬದವರಿಗೆ ಎದುರಾಗಿದೆ. ನಂದೀಶ್ ಕಷ್ಟ ನೋಡಲಾಗದೇ ಒಂದು ತಿಂಗಳು ಸಾಲದ ಕಂತನ್ನು ಸಂಬಂಧಿಗಳು ಕಟ್ಟಿದ್ದಾರೆ. ರೌಡಿ ವಿಲ್ಸನ್ ಗಾರ್ಡನ್ ನಾಗ ಜೊತೆಗೆ ದರ್ಶನ್ ಹರಟೆ ಹೊಡೆಯುತ್ತಿದ್ದು, ಅದೇ ಜೈಲಿನಲ್ಲಿದ್ರೂ ನಂದೀಶ್ಗೆ ಇನ್ನೂ ದಾಸನ ದರ್ಶನಕ್ಕೆ ಅವಕಾಶ ಸಿಗಲಿಲ್ಲ. ತನ್ನಿಂದ ಜೈಲು ಸೇರಿದವರಿಗೆ ಈವರೆಗೂ ದರ್ಶನ್ ಧೈರ್ಯ ಹೇಳಲಿಲ್ಲ. ದರ್ಶನ್ ನಡೆಯಿಂದ ನಂದೀಶ್ ಕುಟುಂಬಕ್ಕೆ ಆತಂಕ ಶುರುವಾಗಿದೆ.

ಈ ವಿಚಾರದ ಕುರಿತು ಮಂಡ್ಯದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಶ್ರೀನಿವಾಸಯ್ಯ, ನಮ್ಮ ಮಗನಿಗೆ 3 ಬಾರಿ ಜೈಲೂಟ ಕೊಡುತ್ತಿದ್ದಾರೆ. ದರ್ಶನ್ ಅವರನ್ನ ನೊಡುತ್ತಿದ್ದರೆ ಬೇಜಾರು ಆಗುತ್ತದೆ. ಆದರರೆ ನಾವು ಏನು ಮಾಡೋದಕ್ಕೆ ಸಾಧ್ಯ? ನೀವು ಮಾತ್ರ ಒಳ್ಳೆಯ ಆಹಾರ ತಿನ್ನುತ್ತಿದ್ದೀರಿ, ನಮ್ಮ ಹುಡುಗನಿಗೆ ಮಾತ್ರ ಜೈಲೂಟ ಅಂತ ಕೇಳೋದಕ್ಕೆ ಆಗುತ್ತಾ? ದುಡ್ಡು ಇರೋರದು ಏನು ಬೇಕಾದರೂ ನಡೆಯುತ್ತದೆ ಎಂದರು. ಮಗನಿಗೆ ಬೇಲ್ ಕೊಡಿಸುವ ಸ್ಥಿತಿಯಲ್ಲಿ ನಾವು ಇಲ್ಲ. ಲಕ್ಷಾಂತರ ರೂಪಾಯಿ ಬೇಕು. ಅಷ್ಟೊಂದು ದುಡ್ಡು ಎಲ್ಲಿಂದ ನಾವು ತರೋಣ. ಜಮೀನು ಇದ್ದಿದ್ರೆ 20 ಗುಂಟೆ ಮಾರಿ ಬಿಡಬಹುದಿತ್ತು. ನಮಗೆ ಊಟಕ್ಕೆ ಕಷ್ಟ ಪಡುವ ಸ್ಥಿತಿಯಾಗಿದೆ. ಮಗನನ್ನು ಕರೆದುಕೊಂಡು ಹೋಗಿದ್ದಾರೆ, ಅವರೇ ಕರೆದುಕೊಂಡು ಬರಲಿ. ಬಿಡಿಸಿಕೊಡಿ ಅಂತ ನಾವು ನೇರವಾಗಿ ದರ್ಶನ್ ಅವರನ್ನ ಕೇಳೋದಕ್ಕೆ ಸಾಧ್ಯನಾ? ಇವತ್ತು ಇಲ್ಲ ಅಂದ್ರೂ 6 ತಿಂಗಳು ಬಿಟ್ಟು ಕರೆದುಕೊಂಡು ಬರಲಿ ಎಂದು ಬೇಸರ ವ್ಯಕ್ತಪಡಿಸಿದರು.
ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ