ಮಾಲೂರು-ಕಾಡದೇನಹಳ್ಳಿ ರಸ್ತೆಯಲ್ಲಿರುವ ಗ್ರಾಮದೇವತೆ ಶ್ರೀ ಪಟಾಲಮ್ಮ ಮತ್ತು ಶ್ರೀ ಮುತ್ಯಾಲಮ್ಮ ದೇವಾಲಯದ ಮುಂಭಾಗ ನೂತನವಾಗಿ ನಿರ್ಮಿಸಿರುವ ಅಶ್ವತ್ಥಕಟ್ಟೆ ಜೀರ್ಣೋದ್ದಾರ ಮತ್ತು ನಾಗದೇವತೆಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಶ್ರೀ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು, ನಾಗಲಾಪುರ ಸಂಸ್ಥಾನ ಮಠ ಕೋಲಾರ ಇವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ನಾಗದೇವತೆಗಳ ನೂತನ ವಿಗ್ರಹಗಳ ಗ್ರಾಮ ಪ್ರದಕ್ಷಿಣೆ ಗೋಧೂಳಿ ಲಗ್ನದಲ್ಲಿ ವೇದಘೋಷಗಳೊಂದಿಗೆ ಆಚಾರ್ಯಾದಿ ಋತ್ವಿಜರೊಡನೆ ಯಾಗಶಾಲ ಪ್ರವೇಶ, ಗಣಪತಿ ಪೂಜೆ, ಗಂಗೆ ಪೂಜೆ, ಸ್ವಸ್ತಿವಾಚನ ದೇವನಾಂದಿ, ಕಲಶಸ್ಥಾಪನೆ ನವಗ್ರಹಾರಾಧನೆ, ಅಗ್ನಿಪ್ರತಿಷ್ಟೆ ಗಣಪತಿ ಹೋಮ, ಮೃತ್ಯುಂಜಯ ಹೋಮ, ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಅರ್ಚಕರಾದ ವಿನೋದ್ ಶಾಸ್ತ್ರಿಗಳು ನಾಗಲಾಪುರ ಇವರ ನೇತೃತ್ವದಲ್ಲಿ ಎಲ್ಲಾ ನಡೆದವು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶ್ರೀ ತೇಜೇಶಲಿಂಗ ಮಹಾಸ್ವಾಮಿಗಳು ನಾಗದೇವರ ಪೂಜೆಗೆ ಭಕ್ತಾದಿಗಳು ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಹೋಗಲು ಆಗದೆ ಇರುವವರು ಇಲ್ಲಿಯೇ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಬಹುದಾಗಿದೆ. ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯದ ಫಲವಾಗಿ ಇಂದು ನಮಗೆ ಮನುಷ್ಯ ಜನ್ಮ ದೊರೆತಿದೆ. ಅನೇಕ ಜನ್ಮಗಳಲ್ಲಿ ಮಾಡಿದ ಒಳ್ಳೆಯ ಕೆಲಸಗಳಿಂದ ನಾವು ಮನುಷ್ಯರಾಗಿ ಜನ್ಮತಾಳಿದ್ದೇವೆ. ಆದ್ದರಿಂದ ನಮ್ಮ ಜನ್ಮ ಸಾರ್ಥಕವಾಗಬೇಕಾದರೆ ನಾವು ಸಮಾಜಮುಖಿ ಕೆಲಸಗಳು, ಪರೋಪಕಾರಿ ಮನೋಭಾವ ಬೆಳೆಸಿಕೊಳ್ಳಬೇಕು. ಸರ್ವಜ್ಞ ಕವಿಯ ಮಾತಿನಂತೆ ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ
ನಾವು ಯಾವುದನ್ನು ಬೇರೆಯವರಿಗೆ ಕೊಡುತ್ತೇವೋ ಅದು ನಮಗೆ ಸಿಗುತ್ತದೆ. ಮತ್ತು ನಾವು ಯಾವುದನ್ನು ಯಾರಿಗೂ ಕೊಡದೆ ಇಟ್ಟುಕೊಳ್ಳುತ್ತೇವೋ ಅದು ಒಂದಲ್ಲ ಒಂದು ದಿನ ಬೇರೆಯವರ ಪಾಲಾಗುತ್ತದೆ ಎಂಬುದು ಇದರಿಂದ ಅರ್ಥವಾಗುತ್ತದೆ ಎಂದರು.
ಸಮಾಜದಲ್ಲಿ ದೇವಾಲಯವನ್ನು ಕಟ್ಟುವುದಕ್ಕೆ
ಸಹಕಾರ ಮಾಡುವುದು, ಕೆರೆಗಳನ್ನು ಕಟ್ಟುವುದು, ಶಾಲೆಗಳ ಅಭಿವೃದ್ಧಿ ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳು ಮಾಡುವ ನಿಟ್ಟಿನಲ್ಲಿ ಶಿಕ್ಷಕರಾದ ಶ್ರೀ.ಆರ್.ಮಣ್ಯಪ್ಪರವರು ತಮ್ಮ ತಾಯಿಯ ಗೌರಮ್ಮ ನವರ ಸವಿನೆನಪಿಗಾಗಿ ದೇವಾಲಯ ಜೀರ್ಣೋದ್ಧಾರ ಹಾಗೂ ನಾಗದೇವತೆಗಳ ಪ್ರತಿಷ್ಠಾಪನೆ ಮಾಡುತ್ತಿರುವುದು ಮೆಚ್ಚುವಂತದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಧನಲಕ್ಷ್ಮಿ, ಶ್ರೀ.ಆರ್.ಮಣ್ಯಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಗಯ್ಯ, ಗುರುಪ್ರಸಾದ್, ವಿನೋದ್ ಶಾಸ್ತ್ರಿಗಳು ನಾಗಲಾಪುರ ಹಾಗೂ ಇತರರು ಉಪಸ್ಥಿತರಿದ್ದರು.