ಮುಳಬಾಗಿಲು – ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡಿರುವ ರೈತರ ಮರಗಿಡಗಳ ೨ನೇ ಕಂತಿನ ಪರಿಹಾರ ನೀಡಲು ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಆಗಸ್ಟ್ ೧ರ ಗುರುವಾರದಿಂದ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿ ಅಹೋರಾತ್ರಿ ಧರಣಿ ಮಾಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾಧ್ಯಂತ ಕಂದಾಯ ಮತ್ತಿತರ ಕಚೇರಿಗಳಿಗೆ ಬೇಟಿ ಕೊಡುವ ಜಿಲ್ಲಾಧಿಕಾರಿಗಳು ಗಡಿಭಾಗದ ಪರಿಹಾರ ವಂಚಿತ ರೈತರ ಹಳ್ಳಿಗಳಿಗೆ ಏಕೆ ಭೇಟಿ ನೀಡುತ್ತಿಲ್ಲ. ೧೦ ವರ್ಷದ ಹಿಂದೆ ಭೂಸ್ವಾಧಿನವಾದ ಪರಿಹಾರಕ್ಕೆ ಕಚೇರಿಗೆ ಅಲೆದಾಟ ಊಟವಿಲ್ಲದೆ ಪರದಾಟ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳಿಂದ ರೈತರ ಜೊತೆ ಚೆಲ್ಲಾಟ ಸಿಗದ ಪರಿಹಾರ ನಿಲ್ಲದ ಕಣ್ಣೀರು ಇದು ಗಡಿಭಾಗದ ರೈತರು ರಸ್ತೆ ಅಭಿವೃದ್ದಿಗೆ ಭೂಮಿ ಕೊಟ್ಟ ತಪ್ಪಿಗೆ ಶಿಕ್ಷೆ ಕನಿಷ್ಠ ಜಿಲ್ಲಾಧಿಕಾರಿಗಳಾದರೂ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸುತ್ತಾರೆಂಬ ಅನ್ನದಾತನ ನೀರೀಕ್ಷೆ ಹುಸಿಯಾಗಿದೆ ಎಂದು ಅವ್ಯವಸ್ಥೆ ವಿರುದ್ದ ನೊಂದ ರೈತರಾದ ಏತುರಹಳ್ಳಿ ಮಾರಪ್ಪ ನಾರಾಯಣಸ್ವಾಮಿ ಅಸಮಾಧಾನ ಕಣ್ಣೀರು ಸುರಿಸಿದರು.
ಭೂಮಿ ಕಳೆದುಕೊಂಡ ರೈತ ಕುಟುಂಬದಲ್ಲಿ ತಾತ, ಅಪ್ಪ ತೀರಿಕೊಂಡಿದ್ದು, ವಂಶವೃಕ್ಷದ ಪ್ರಕಾರ ಮೊಮ್ಮಗನಿಗೆ ಮರಗಿಡಗಳಿಗೆ ಪರಿಹಾರ ಕೊಡಿ ಸ್ವಾಮಿ ಎಂದರೆ ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಂಡು ದಲಿತ ರೈತ ಕುಟುಂಬಗಳನ್ನು ಕಡೆಗಣಿಸುತ್ತಿದ್ದಾರೆಂದು ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸಭೆಯಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಗಡಿಭಾಗದ ಏತರನಹಳ್ಳಿ, ಚುಕ್ಕನಹಳ್ಳಿ ರೈತರ ಮರಗಿಡಗಳ ಪರಿಹಾರ ನೀಡುವಂತೆ ತಾಲೂಕು ದಂಡಾಧಿಕಾರಿಗಳಿಗೆ ಕಾಲು ಮುಗಿದಿದ್ದು ಆಯ್ತು, ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಕೈ ಮುಗಿದಿದ್ದೂ ಆಯ್ತು, ಜನಪ್ರತಿನಿಧಿಗಳ ಮನೆಬಾಗಿಲಿಗೆ ಅಲೆದಾಡಿದ್ದೂ ಆಯ್ತು. ನೊಂದ ರೈತರ ಪರಿಹಾರವೂ ಇಲ್ಲ. ಸಮಸ್ಯೆಯೂ ಬಗೆಹರಿಸಲಿಲ್ಲ ಎಂದು ರೈತ ವಿರೋಧಿ ಧೋರಣೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪರಿಹಾರ ಕೊಡಿ ಸ್ವಾಮಿ ಎಂದು ವಿಶೇಷ ಭೂಸ್ವಾಧೀನಾಧಿಕಾರಿಗಳನ್ನು ಕೇಳಿದರೆ ತಾಲೂಕು ದಂಡಾಧಿಕಾರಿಗಳ ವರದ ತನ್ನಿ ಎಂದು ಹೇಳುತ್ತಾರೆ. ವರದಿ ಕೇಳಿದರೆ ಅಲ್ಲಿನ ಸಿಬ್ಬಂದಿ ನಮ್ಮ ಬಳಿ ನಿಮ್ಮ ದಾಖಲೆಯೂ ಇಲ್ಲ. ವರದಿ ನೀಡಲು ನಮಗೆ ಸಮಯವೂ ಇಲ್ಲ ಎಂದು ೨೦೧೬ ರಿಂದ ಇದುವರೆಗೂ ಕನಿಷ್ಠ ನಮ್ಮ ಹಕ್ಕನ್ನು ಪಡೆದುಕೊಳ್ಳಲು ಆಗಲಿಲ್ಲ ಎಂದ ಮೇಲೆ ನಾವು ಈ ಜಿಲ್ಲೆಯಲ್ಲಿ ಇದ್ದೂ ಇಲ್ಲದಂತೆ. ದಯವಿಟ್ಟು ಜಿಲ್ಲಾಧಿಕಾರಿಗಳು ಮನಸು ಮಾಡಿ ಪಕ್ಕದ ಆಂಧ್ರ ರಾಜ್ಯಕ್ಕೆ ನಮ್ಮ ಗ್ರಾಮಗಳನ್ನು ಸೇರಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಮನವಿ ಮಾಡಿದರು.
ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ