ಬೆಂಗಳೂರು, ಜು. ೨೫- ವಿಧಾನಸಭೆಯಲ್ಲಿ ಮುಡಾ ಹಗರಣದ ಚರ್ಚೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿರುವ ಪ್ರತಿಪಕ್ಷಗಳ ಸದಸ್ಯರುಗಳು ನಿನ್ನೆ ರಾತ್ರಿ ಸದನದಲ್ಲಿ ನಿದ್ರೆ ಬರುವವರೆಗೂ ಹಾಡು, ನೃತ್ಯ, ಭಜನೆ, ಅಂತ್ಯಾಕ್ಷರಿಗಳನ್ನು ಹಾಡಿ ಮನರಂಜಿಸುತ್ತಾ ಕಾಲ ದೂಡಿದರು.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿ ನಡೆದಿರುವ ಹಗರಣದ ಚರ್ಚೆಗೆ ಅವಕಾಶ ಸಿಗದೇ ಇದ್ದುದರಿಂದ ಸಿಟ್ಟಿಗೆದ್ದ ವಿಪಕ್ಷಗಳ ಸದಸ್ಯರುಗಳು ನಿನ್ನೆ ರಾತ್ರಿಯಿಡೀ ಸದನದಲ್ಲಿಯೇ ಮಲಗಿ ಪ್ರತಿಭಟನೆ ನಡೆಸಿದ್ದು, ರಾತ್ರಿ ಬಿಜೆಪಿ-ಜೆಡಿಎಸ್ನ ಹಲವು ಸದಸ್ಯರು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಸದಸ್ಯರುಗಳಿಗೆ ಮನರಂಜನೆಯನ್ನು ನೀಡಿದ್ದು ವಿಶೇಷವಾಗಿತ್ತು.

ಧಿಕ್ಕಾರದ ಭಜನೆ
ನಿನ್ನೆ ರಾತ್ರಿ ಧರಣಿ ನಿರತ ಬಿಜೆಪಿ-ಜೆಡಿಎಸ್ ಸದಸ್ಯರುಗಳು ಗೋವಿಂದ.. ಗೋವಿಂದ.. ಮುಡಾ ನಿವೇಶನ ಗೋವಿಂದ.. ಗೋವಿಂದ.. ಗೋವಿಂದ.. ವಾಲ್ಮೀಕಿ ನಿಗಮದ ಹಣ ಗೋವಿಂದ.. ಎಂದು ಹಾಸ್ಯದ ದಾಟಿಯಲ್ಲಿ ಭಜನೆ ಮಾಡಿದ್ದು ವಿಶೇಷ ಎನಿಸಿತ್ತು.ನಂತರ ಬಿಜೆಪಿ ಸದಸ್ಯರಾದ ಪ್ರಭು ಚೌವ್ಹಾಣ್ ಅವರಂತೂ ಲಂಬಾಣಿ ಸಮುದಾಯದ ಸಾಂಪ್ರದಾಯಿಕ ನೃತ್ಯ, ಹಾಡುಗಳನ್ನು ಹಾಡುತ್ತಾ ಎಲ್ಲರ ಮನಗೆದ್ದರು.ಪ್ರಭು ಚೌವ್ಹಾಣ್ರವರ ಕಲೆಗಾರಿಕೆಯನ್ನು ಪ್ರತಿಪಕ್ಷ ನಾಯಕರಾದ ಆರ್. ಅಶೋಕ್ ಸೇರಿದಂತೆ ಎಲ್ಲರೂ ಮೆಚ್ಚಿ ಹೊಗಳಿದ ಪ್ರಸಂಗವೂ ಜರುಗಿತು.ಪ್ರಭು ಚೌವ್ಹಾಣ್ರವರ ಜತೆಗೆ ಬಿಜೆಪಿಯ ಗುರುರಾಜ್ ಶೆಟ್ಟಿ, ವೇದವ್ಯಾಸ ಕಾಮತ್ ಸೇರಿದಂತೆ ಹಲವು ಸದಸ್ಯರು ಹಾಡು, ಭಜನೆಗಳನ್ನು ಹಾಡುತ್ತಾ ಕಾಲ ದೂಡಿದರು. ಕೆಲ ಸದಸ್ಯರುಗಳು ಅಂತ್ಯಾಕ್ಷರಿಗಳನ್ನು ಹಾಡಿದರು. ಸಿನಿಮಾ, ಜಾನಪದ ಹಾಡುಗಳು ಸದನದಲ್ಲಿ ರಾತ್ರಿ ಕೇಳಿ ಬಂದವು.ಹಿರಿಯ ಸದಸ್ಯರುಗಳು ಕಿರಿಯ ಸದಸ್ಯರ ಕಲಾ ಪ್ರತಿಭೆಗಳನ್ನು ನೋಡುತ್ತಾ ಅವರನ್ನು ಪ್ರೋತ್ಸಾಹಿಸುತ್ತಾ ನಿದ್ರೆಗೆ ಜಾರಿದರು.ಸದನದಲ್ಲೇ ಮಲಗಿದ ಸದಸ್ಯರುಗಳಿಗೆ ವಿಧಾನಸಭೆ ಸಚಿವಾಲಯದಿಂದ ದಿಂಬು, ಬೆಡ್ಶಿಟ್, ಹಾಸಿಗೆ ವ್ಯವಸ್ಥೆಗಳನ್ನು ಮಾಡಲಾಗಿತ್ತು.ಕೆಲ ಸದಸ್ಯರು ಸದನದ ಒಳಗೆ ಮಲಗಿದರೆ, ಇನ್ನು ಕೆಲ ಸದಸ್ಯರು ಸದನದ ಹೊರಗಿನ ಮೊಗಸಾಲೆಯಲ್ಲಿರುವ ಸೋಪಾಗಳಲ್ಲಿ ಮಲಗಿದರು.ಬಹುತೇಕ ಸದಸ್ಯರು ಸರಿಯಾಗಿ ನಿದ್ದೆ ಬರಲಿಲ್ಲ ಎಂದು ಬೆಳಿಗ್ಗೆ ಮಾತನಾಡಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.ಇಂದು ಬೆಳಗಿನ ಜಾವ ೬ ರವರೆಗೂ ಸದನದಲ್ಲೇ ಮಲಗಿದ್ದ ವಿಪಕ್ಷ ಸದಸ್ಯರುಗಳು ನಂತರ ಒಬ್ಬೊಬ್ಬರಾಗಿಯೇ ಶಾಸಕರ ಭವನಕ್ಕೆ ತೆರಳಿ ಸ್ನಾನ, ಇತ್ಯಾದಿಗಳನ್ನು ಮುಗಿಸಿಕೊಂಡು ಮತ್ತೆ ೯ ಗಂಟೆಯೊತ್ತಿಗೆ ಸದನಕ್ಕೆ ಹಾಜರಾದರು.ಬಹುತೇಕ ಪ್ರತಿಪಕ್ಷ ಸದಸ್ಯರುಗಳು ನಿನ್ನೆ ಇಡೀ ರಾತ್ರಿ ಸದನದಲ್ಲೇ ಇದ್ದು, ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಿದರು.