ಕೊಲ್ಹಾರ : ಡೆಂಗ್ಯೂ ನಿಯಂತ್ರಣ ಕುರಿತು ಮುಂಜಾಗ್ರತ ಕ್ರಮವಾಗಿ ತಹಶೀಲ್ದಾರ ಎಸ್.ಎಸ್ ನಾಯಕಲಮಠ ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಮದ್ದೀನ ನೇತೃತ್ವದಲ್ಲಿ ಸೋಮವಾರ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ಜರುಗಿತು.

ಡೆಂಗ್ಯೂ ನಿಯಂತ್ರಣದ ಕುರಿತು ಮುಂಜಾಗ್ರತವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚಿರ್ಚಿಸಲಾಯಿತು.
ತಹಸೀಲ್ದಾರ ಎಸ್.ಎಸ್ ನಾಯಕಲಮಠ ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಮದ್ದೀನ ಮಾತನಾಡಿ ಕೊಲ್ಹಾರ ಪಟ್ಟಣ ಸಹಿತ ತಾಲೂಕ ವ್ಯಾಪ್ತಿಯಲ್ಲಿನ ಪ್ರತಿ ಗ್ರಾಮಗಳಲ್ಲಿ ಫಾಗಿಂಗ್ ಮಾಡುವುದು, ಬೇಕಾ ಬಿಟ್ಟಿಯಾಗಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು, ಡೆಂಗ್ಯೂ ನಿಯಂತ್ರಣ ಕುರಿತು ಗ್ರಾಮಗಳಲ್ಲಿ ಡಂಗೂರದ ಮೂಲಕ ಹಾಗೂ ಘನತ್ಯಾಜ್ಯ ವಿಲೇವಾರಿ ವಾಹನದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಡೆಂಗ್ಯೂ ತಡೆಗಟ್ಟಲು ವಿವಿಧ ಕ್ರಮ ಕೈಗೊಳ್ಳಬೇಕು ಹಾಗೂ ಪ್ರತಿ ಶುಕ್ರವಾರ ಮತ್ತು ಶನಿವಾರವಾರದಂದು ವಿಶೇಷ ಅಭಿಯಾನವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.