ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆ ಪ್ರಬಲವಾಗುತ್ತಿದೆ. ಮಲೆನಾಡು ಮತ್ತು ಕರಾವಳಿ ಕರ್ನಾಟಕ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ಎಲ್ಲಾ ಜಲಪಾತಗಳು ತುಂಬಿ ಹರಿಯುತ್ತಿದೆ. ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳು ಈ ಸ್ಥಳಗಳಿಗೆ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಜಲಪಾತಗಳಲ್ಲಿ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಿವೆ,
ಇತ್ತೀಚೆಗೆ ಜನರಿಗೆ ಸೋಷಿಯಲ್ ಮೀಡಿಯಾ ಗೀಳು ಹೆಚ್ಚಾಗಿದೆ. ಇನ್ಸ್ಟಾಗ್ರಾಂ ರೀಲ್ಸ್ ನಲ್ಲಿ ಭೋರ್ಗರೆಯುವ ನೀರಿನ ಮಧ್ಯೆ ನಿಂತು ಫೋಟೋ, ವಿಡಿಯೊ ತೆಗೆಯುವ ಹುಚ್ಚಾಟದಲ್ಲಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ಲೋನಾವಾಲಾದಲ್ಲಿ ಜಲಪಾತದಲ್ಲಿ ಕುಟುಂಬವೊಂದರ ಸದಸ್ಯರೆಲ್ಲರೂ ಮುಳುಗಿ ಮೃತಪಟ್ಟ ಘಟನೆ ನೋಡಿದರೆ ಭಯಾನಕವಾಗಿದೆ.

ಹಲವು ಪ್ರವಾಸಿಗರು ಕರ್ನಾಟಕದ ಜಲಪಾತಗಳಲ್ಲಿ ಕೊಚ್ಚಿಹೋಗುತ್ತಿರುವ ಘಟನೆಗಳು ನಡೆಯುತ್ತಿದ್ದು, ಅರಣ್ಯ ಇಲಾಖೆಯು ಈ ಜಲಪಾತಗಳಿಗೆ ಪ್ರವಾಸಿಗರನ್ನು ನಿಷೇಧಿಸುವ ನಿರ್ಧಾರಕ್ಕೆ ಬರುವಂತೆ ಮಾಡಿದೆ. ಹೆಚ್ಚಿನ ಸ್ಥಳಗಳಲ್ಲಿ, ಪೊಲೀಸ್ ಅಥವಾ ಅರಣ್ಯ ಇಲಾಖೆ ಅಧಿಕಾರಿಗಳ ಸರಿಯಾದ ಮೇಲ್ವಿಚಾರಣೆ ಇಲ್ಲದಿರುವುದು ದುರಂತಗಳಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊಸಗದ್ದೆ ಬಳಿ ದಬ್ಬೆ ಜಲಪಾತ, ಆಗುಂಬೆಯ ಹಿಡ್ಲುಮನೆ, ಬರ್ಕಾಣ ಮತ್ತು ಒನಕೆ ಅಬ್ಬೆ, ಆಗುಂಬೆಯ ನಿಡಿಗೋಡು ಗ್ರಾಮದ ಕುಂಚಿಕಲ್ ಜಲಪಾತ ಮತ್ತು ಜೋಗಿ ಗುಂಡಿ ಜಲಪಾತಗಳಲ್ಲಿ ಅರಣ್ಯ ಇಲಾಖೆ ಪ್ರವಾಸಿಗರಿಕೆ ನೀರಿಗಿಳಿಯದಂತೆ ಎಚ್ಚರಿಕೆ ನೀಡಿದೆ.
ನಮ್ಮ ಪ್ರವಾಸಿ ಮಿತ್ರ ಅಥವಾ ಭದ್ರತಾ ಸಿಬ್ಬಂದಿಯನ್ನು ಗುರುತಿಸಲಾದ ಪ್ರವಾಸಿ ತಾಣಗಳಲ್ಲಿ ಮಾತ್ರ ನಿಯೋಜಿಸಲಾಗಿದೆ. ಮಳೆಗಾಲದಲ್ಲಿ ಮಾತ್ರ ಜೀವ ತುಂಬುವ ಜಲಪಾತಗಳಲ್ಲಿ ನಮ್ಮಲ್ಲಿ ವಿಶೇಷ ಸಿಬ್ಬಂದಿ ಇಲ್ಲ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಟಿ.ಧರ್ಮಪ್ಪ.