ಆಟೋ ಚಾಲಕರ ವಿರುದ್ಧ ವಿಶೇಷ ಪೊಲೀಸರ ಕಾರ್ಯಾಚರಣೆ

 ಬೆಂಗಳೂರು – ಸಂಚಾರ ಪೂರ್ವ ವಿಭಾಗದ ಪೊಲೀಸರು ನಿನ್ನೆ ಆಟೋ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 482ಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಂಡು 2,41,000ರೂ. ದಂಡ ಸಂಗ್ರಹಿಸಿದ್ದಾರೆ.

ಕರೆದಲ್ಲಿಗೆ ಬರದಿರುವ ಆಟೋ ಚಾಲಕರ ವಿರುದ್ಧ 167 ಪ್ರಕರಣಗಳು, ಮೀಟರ್‌ಗಿಂತ ಅಧಿಕ ಬಾಡಿಗೆ ಕೇಳುವ ಆಟೋ ಚಾಲಕರ ವಿರುದ್ಧ 158 ಪ್ರಕರಣಗಳು, ಏಕಮುಖ ಸಂಚಾರಕ್ಕೆ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವ ಚಾಲಕರ ವಿರುದ್ಧ 157 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದ್ದು, ಜತೆಗೆ 2,41,000ರೂ. ದಂಡ ಸಂಗ್ರಹಿಸಲಾಗಿದೆ.

ಇದೇ ಸಂದರ್ಭದಲ್ಲಿ ಸಂಚಾರ ನಿಯಮಗಳ ಮಹತ್ವದ ಬಗ್ಗೆ ಆಟೋ ಚಾಲಕರಿಗೆ ಸಂಚಾರ ವಿಭಾಗದ ಪೊಲೀಸರು ಅರಿವು ಮೂಡಿಸಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ತಿಳಿಸಿದ್ದಾರೆ.

ಕರೆದಲ್ಲಿಗೆ ಬರದಿರುವ, ಮೀಟರ್‌ಗಿಂತ ಅಧಿಕ ಬಾಡಿಗೆ ಕೇಳುವ ಹಾಗೂ ಏಕಮುಖ ಸಂಚಾರಕ್ಕೆ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವ ಆಟೋ ಚಾಲಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಈ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಮುಂದಿನ ದಿನಗಳಲ್ಲಿಯೂ ಸಹ ಈ ವಿಶೇಷ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಡಿಸಿಪಿ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *