ತುಮಕೂರು, ಜೂ.22: ವಿವಾಹಿತ ಪುರುಷನೊಂದಿಗೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾದ ಘಟನೆ ನಡೆದಿದ್ದು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆ ಯ ಬಳಿ ನಾಪತ್ತೆಯಾದವರ ಚಪ್ಪಲಿಗಳು ಪತ್ತೆಯಾಗಿದೆ. ಜೊತೆಗೆ ಇಲ್ಲಿಯೇ ಕಾರು ನಿಲ್ಲಿಸಿ ಮೊಬೈಲ್ಗಳನ್ನು ಕಾರಲ್ಲಿಟ್ಟು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ಅನನ್ಯ (19) ಎಂಬ ಕಾಲೇಜು ವಿದ್ಯಾರ್ಥಿನಿ, ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ (50) ಎಂಬ ವಿವಾಹಿತ ಪುರುಷನೊಂದಿಗೆ ಕಳೆದ 3ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದಳು.

ಇನ್ನು ಯುವತಿ ಪ್ರೇಮಕ್ಕೆ ಕುಟುಂಬದವರ ವಿರೋಧ ಹಿನ್ನಲೆ ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಬೋಟ್ ಸಹಾಯದಿಂದ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಈಜು ಪಟುಗಳನ್ನು ಕರೆಯಿಸಿ ಕೆರೆಯಲ್ಲಿ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇತ್ತ ಸ್ಥಳದಲ್ಲಿ ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಅನಿಲ್, ಕೊಳಾಲ ಪಿಎಸ್‌ಐ ರೇಣುಕಾ ಯಾದವ್ ಹಾಗೂ ಯೋಗೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.