ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ 66 ಸ್ಥಾನಗಳಿಗೆ ಬರಲು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಕಾರಣ ಎಂದು ಬಿಜೆಪಿಯ ಹಿರಿಯ ನಾಯಕ ವೀರೇಶ್ ಹನಗವಾಡಿ ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ‘ರೇಣುಕಾಚಾರ್ಯ ಅವರು ವೀರಶೈವ ಜಂಗಮ ಜಾತಿಯಲ್ಲಿ ಹುಟ್ಟಿದವರು. ಜೊತೆಗೆ ವೀರಶೈವರಲ್ಲಿ ಇವರಿಗೆ ಗುರುವಿನ ಸ್ಥಾನವಿದೆ. ಇಂತವರು ಪರಿಶಿಷ್ಟ ಜಾತಿಗೆ ಸೇರಿದ ಬೇಡ ಜಂಗಮ ಜಾತಿಪತ್ರ ಪಡೆದರು. ಇದರಿಂದ ಬಿಜೆಪಿ ಹೆಚ್ಚಿನ ಸೀಟು ಬರಲು ವಿಫಲವಾಯಿತು ಎಂದರು.
ರೇಣುಕಾಚಾರ್ಯ ಯಾವಾಗ ಪರಿಶಿಷ್ಟ ಜಾತಿಗೆ ಸೇರಿದ ಬೇಡ ಜಂಗಮ ಜಾತಿಪತ್ರ ಪಡೆದರೂ ಈ ಕಾರಣದಿಂದ ಇಡೀ ರಾಜ್ಯದಲ್ಲಿನ ದಲಿತರು ಬಿಜೆಪಿ ವಿರೋಧಿಗಳಾದರು. ಕಳೆದ ವಿಧಾನ ಸಭೆ ಸಭೆ ಚುನಾವಣೆಯಲ್ಲಿ 66 ಸ್ಥಾನಕ್ಕೆ ಬಿಜೆಪಿ ಬರಲು ಇದೇ ಮುಖ್ಯವಾದ ಕಾರಣ. ಇದರ ಜೊತೆಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿ, ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣರಾದರು ಎಂದು ಕಿಡಿಕಾರಿದರು.

ಈ ಹಿಂದೆ ಅಮಿತ್ ಶಾ ಅವರ ಜೊತೆ ಸಭೆ ಮಾಡಿದಾಗ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ವಿರುದ್ಧ ರೇಣುಕಾಚಾರ್ಯ ದೂರು ಹೇಳಿದ್ದರು. ಈ ವೇಳೆ ಸ್ವತಃ ಅಮಿತ್ ಶಾ ಅವರೇ ರೇಣುಕಾಚಾರ್ಯ ಅವರಿಗೆ ಕೈ ಮುಗಿದು ಕ್ಷಮೆ ಕೇಳಿದ್ದರು. ಶಾ ಅವರು ಕೈ ಮುಗಿದು ಕ್ಷಮೆ ಕೇಳಿದಕ್ಕಾದರೂ ಚೆನ್ನಾಗಿ ಚುನಾವಣೆ ಮಾಡಬೇಕಿತ್ತು. ಆದ್ರೆ ಮಾಡಿಲ್ಲ. ಈ ವಿಚಾರವನ್ನ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇವೆ ಎಂದು ವೀರೇಶ್ ಹೇಳಿದರು.