10 ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಬಳ್ಳಾರಿಯ ಸಂಡೂರ ತಾಲೂಕಿನ ತೋರಣಗಲ್ ಬಳಿಯ ಜಿಂದಾಲ್ ವಿದ್ಯಾನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಗ ಪ್ರದರ್ಶನ ಮಾಡಿದರು. ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಸಚಿವ ಸಂತೋಷ ಲಾಡ್, ಸಂಸದ ತುಕಾರಾಂ, ನಟಿ ಶ್ರೀಲೀಲಾ ಭಾಗಿಯಾಗಿದ್ದರು.

ವಚನಾನಂದ ಶ್ರೀಗಳ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ಆರಂಭವಾಯಿತು. ಅವಧೂತ ವಿನಯ್ ಗುರೂಜಿ ಅವರು ಯೋಗ ಕಾರ್ಯಕ್ರಮ ನಿರ್ವಹಣೆ ಮಾಡಿದರು. ವಿವಿಧ ಯೋಗಾಸನಗಳ ಸೂಚನೆ ನೀಡುತ್ತಾ, ತಾವೂ ಯೋಗ ಆಸನಗಳ ಪ್ರದರ್ಶನ ನಡೆಸಿಕೊಟ್ಟರು. ಇದೇ ವೇಳೆ ಸಾಂಪ್ರದಾಯಿಕವಾಗಿ ಪಂಚೆ ಶಲ್ಯ ಧರಿಸಿದ್ದ ಸಿದ್ದರಾಮಯ್ಯ ಅವರು ವಚನಾನಂದ ಶ್ರೀಗಳ ಸೂಚನೆಯಂತೆ ಏಕಾಗ್ರತೆಯಿಂದ ಯೋಗ ಪ್ರದರ್ಶನ ಮಾಡಿದರು. ವೇದಿಕೆಯಲ್ಲಿ ನಟಿ ಶ್ರೀಲೀಲಾ ಸಹ ತದೇಕಚಿತ್ತದಿಂದ ಯೋಗ ಮಾಡಿದರು. ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳೂ ಪಾಲ್ಗೊಂಡಿದ್ದರು.

ಇದೇ ವೇಳೆ ಭಾರತವು ಜಗತ್ತಿಗೆ ಪರಿಚಯಿಸಿದ ಅನನ್ಯ ಸಾಧನ ಯೋಗ. ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿ ಸಾಧ್ಯ. ನಿತ್ಯ ಜೀವನಕ್ಕೆ ಬೇಕಿರುವ ಏಕಾಗ್ರತೆ, ಸಂಯಮ, ಒತ್ತಡ ನಿರ್ವಹಣೆಯ ಕೌಶಲ್ಯಗಳು ಯೋಗದಿಂದ ಲಭಿಸುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.