ಮೆಕ್ಕಾದಲ್ಲಿ ತಾಪಮಾನ ಏರಿಕೆ – 550 ಕ್ಕೂ ಹೆಚ್ಚು ಹಜ್‌ ಯಾತ್ರಿಕರು ಸಾವು

ತಾಪಮಾನ ಏರಿಕೆಯಿಂದಾಗಿ ಹಜ್​ ಯಾತ್ರೆಗೆ ಮೆಕ್ಕಾಗೆ ತೆರಳಿದ್ದವರ ಪೈಕಿ 550 ಮಂದಿ ಸಾವನ್ನಪ್ಪಿದ್ದಾರೆ. ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಲಕ್ಷಾಂತರ ಜನ ಹಜ್‌ ಯಾತ್ರೆಗೆ ತೆರಳಿದ್ದರು. ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್​ ದಾಟಿದೆ. ಮೃತರ ಪೈಕಿ ಕನಿಷ್ಠ 323 ಮಂದಿ ಈಜಿಪ್ಟಿಯನ್ನರು, ಕನಿಷ್ಠ 60 ಮಂದಿ ಜೋರ್ಡಾನಿಯನ್ನರು, ವಿವಿಧ ದೇಶಗಳ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಮೃತ ದೇಹಗಳನ್ನು ಮೆಕ್ಕಾದ ಅಲ್-ಮುಯಿಸೆಮ್ ನೆರೆಹೊರೆಯಲ್ಲಿರುವ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಮುಸ್ಲಿಮರ ಪವಿತ್ರ ಯಾತ್ರೆ ಎಂದೇ ಕರೆಸಿಕೊಳ್ಳುವ ಹಜ್ ಯಾತ್ರೆ ಜೂನ್​ 14ರಿಂದ ಪ್ರಾರಂಭವಾಗಿತ್ತು. ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಎಂದರೆ ಅದು ಮೆಕ್ಕಾ, ಸೌದಿ ಅರೇಬಿಯಾದ ಈ ನಗರ ಮೆಕ್ಕಾಗೆ ಹಜ್ ಯಾತ್ರೆ ಭಾಗವಾಗಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ವರ್ಷ ಭೇಟಿ ನೀಡುತ್ತಾರೆ. ಈ ವರ್ಷ ಸುಮಾರು 18 ಲಕ್ಷ ಯಾತ್ರಾರ್ಥಿಗಳು ಹಜ್‌ ಯಾತ್ರೆಯಲ್ಲಿ ಭಾಗವಹಿಸಿದ್ದರು, ಅವರಲ್ಲಿ 16 ಲಕ್ಷ ಯಾತ್ರಿಕರು ವಿವಿಧ ದೇಶಗಳಿಂದ ಬಂದಿದ್ದರು ಎಂದು ರಾಜತಾಂತ್ರಿಕರು ತಿಳಿಸಿದ್ದಾರೆ.

1920 ರ ದಶಕದಲ್ಲಿ ಮೆಕ್ಕಾವನ್ನು ಸೌದಿ ರಾಜಮನೆತನ ತಮ್ಮ ವಶಕ್ಕೆ ತೆಗೆದುಕೊಂಡಿತು. ಆ ಬಳಿಕ ತೀರ್ಥಯಾತ್ರೆ ಆಯೋಜಿಸುವುದು ಹೆಮ್ಮೆ ಎಂದು ಅದು ಪರಿಗಣಿಸಿದೆ. ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲಾಗಿದೆ. ಯಾತ್ರಾರ್ಥಿಗಳ ಯೋಗಕ್ಷೇಮಕ್ಕಾಗಿ ಸೌದಿ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. 

Leave a Reply

Your email address will not be published. Required fields are marked *