ಕುವೈತ್ನಲ್ಲಿ ಎರಡು ದಿನಗಳ ಹಿಂದೆ ಮಂಗಾಫ್ ನಗರದ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರ ಮೃತದೇಹಗಳನ್ನು ಹೊತ್ತ ವಾಯುಸೇನೆಯ ವಿಶೇಷ ವಿಮಾನ ಕೇರಳಕ್ಕೆ ಬಂದಿಳಿದಿದೆ.

ಮೃತರಲ್ಲಿ ಕೇರಳದ 23, ತಮಿಳುನಾಡಿನ 7, ಉತ್ತರ ಪ್ರದೇಶದ 3, ಒಡಿಶಾದ 2 ಹಾಗೂ ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದಿಂದ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಕೇರಳ ಮುಖ್ಯಮಂತ್ರಿಯಾದ ಪಿಣರಾಯಿ ವಿಜಯನ್ ಅವರು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಲ್ಲಿ ಮೃತಪಟ್ಟಿರುವವರ ಪೈಕಿ ಅತೀ ಹೆಚ್ಚು 23 ಜನ ಕೇರಳದವರಾಗಿದ್ದಾರೆ. ಮೊದಲು ಮೃತದೇಹಗಳನ್ನು ಕೇರಳದಲ್ಲಿ ಇಳಿಸಿದ ನಂತರ ಆ ವಿಮಾನವು ಸಂಜೆ 4ರ ಸುಮಾರಿಗೆ ದೆಹಲಿ ತಲುಪಲಿದೆ.