50 ನೇ G7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಡರಾತ್ರಿ ಇಟಲಿಯ ಅಪುಲಿಯಾಗೆ ತಲುಪಿದ್ದಾರೆ. ಮೋದಿಯವರು 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದು ಮೊದಲ ವಿದೇಶ ಪ್ರವಾಸವಾಗಿದೆ.

ಮೋದಿಯವರನ್ನು ಸ್ವಾಗತಿಸಲು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಕೂಡ ಬ್ರಿಂಡಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಜೂನ್ 13-15 ರವರೆಗೆ ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ಬೊರ್ಗೊ ಎಗ್ನಾಜಿಯಾ ರೆಸಾರ್ಟ್ನಲ್ಲಿ ಜಿ7 ಶೃಂಗಸಭೆ ನಡೆಯುತ್ತಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರಡೊ ಸೇರಿದಂತೆ ಇಟಲಿ ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ 11 ಅಭಿವೃದ್ಧಿಶೀಲ ರಾಷ್ಟ್ರಗಳ ನಾಯಕರನ್ನು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.

ಜಿ 7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಗೆ ಬಂದಿಳಿದಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. “ವಿಶ್ವ ನಾಯಕರೊಂದಿಗೆ ಉಪಯುಕ್ತ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಎದುರು ನೋಡುತ್ತಿದ್ದೇನೆ. ಒಟ್ಟಾಗಿ, ನಾವು ಜಾಗತಿಕ ಸವಾಲುಗಳನ್ನು ಎದುರಿಸುವ ಮತ್ತು ಉಜ್ವಲ ಭವಿಷ್ಯಕ್ಕಾಗಿ ಅಂತರರಾಷ್ಟ್ರೀಯ ಸಹಕಾರವನ್ನು ವೃದ್ಧಿಸುವ ಗುರಿಯನ್ನು ಹೊಂದಿದ್ದೇವೆ”