ಬೆಂಗಳೂರು, ಜೂ.೩- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡು ದಿನದಿಂದ ಸುರಿಯುತ್ತಿರುವ ವರ್ಷಧಾರೆಗೆ ಬೆಂಗಳೂರು ಅಕ್ಷರಶಃ ತತ್ತರಿಸಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ೨೦೦ಕ್ಕೂ ಅಧಿಕ ಮರಗಳು, ರೆಂಬೆಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದರೆ, ಮತ್ತೊಂದೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಮಳೆ ಸಂಬಂಧ ಅವಘಡಗಳಲ್ಲಿ ಮೂವರು ಗಾಯಗೊಂಡಿದ್ದಾರೆ.
ಮಳೆಯ ಜೊತೆಗೆ ವಿಪರೀತ ಗಾಳಿಯೂ ಸೇರಿರುವುದರಿಂದ ವಾಣಿಜ್ಯ ಮಳಿಗೆಗಳ ಬೋರ್ಡ್ ಗಳು ರಸ್ತೆಗೆ ಬಂದು ಬಿದ್ದರೆ, ಕೆಲವೆಡೆ ಅಂಡರ್ ಪಾಸ್ ನಲ್ಲಿ ನೀರು ನಿಂತು ವಾಹನ ಸಂಚಾರ ದುಸ್ತರವಾಗಿದೆ. ಇದರ ಜೊತೆಗೆ ಬೈಕ್, ಕಾರುಗಳಿಗೆ ಕೂಡ ಭಾರಿ ಹಾನಿ ಉಂಟಾಗಿದೆ.
ಇಲ್ಲಿನ ಆರ್ಆರ್ ನಗರದಲ್ಲಿ ಓರ್ವ ಹಾಗೂ ಜಯನಗರದಲ್ಲಿ ಇಬ್ಬರಿಗೆ ಗಾಯವಾಗಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ೩೮ ಪ್ರದೇಶಗಳಲ್ಲಿ ರಸ್ತೆ, ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಅವಾಂತರ ಸೃಷ್ಟಿಯಾಗಿವೆ. ಸದ್ಯ ರಸ್ತೆಗಳಲ್ಲಿ ನಿಂತಿದ್ದ ನೀರು ಖಾಲಿಯಾಗುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಬಿದ್ದ ಮರಗಳನ್ನು ತೆರವು ಮಾಡಲಾಗುತ್ತಿದೆ. ರಾತ್ರಿ ಸುರಿದ ಮಳೆಯಿಂದಾಗಿ ಸಿಲಿಕಾನ್ ಸಿಟಿ ಜನರು ತತ್ತರಿಸಿ ಹೋಗಿದ್ದಾರೆ.

ಬೆಂಗಳೂರು ಹೊರ ವಲಯದ ಆನೇಕಲ್ ತಾಲ್ಲೂಕಿನಾದ್ಯಂತ ಜೋರು ಮಳೆಯಾಗಿದ್ದು, ಇಂದು ಮುಂಜಾನೆಯೂ ಮಳೆಯಾಗಿದೆ. ನಿನ್ನೆ ರಾತ್ರಿ ಸುರಿದ ಗುಡುಗು ಸಹಿತ ಮಳೆಗೆ ಆನೇಕಲ್, ಚಂದಾಪುರ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಜನರು ಪರದಾಟ ನಡೆಸುದ್ದಾರೆ. ನಿನ್ನೆ ಸಂಜೆಯೂ ಇದೇ ರೀತಿ ಆನೇಕಲ್ ತಾಲ್ಲೂಕಿನಲ್ಲಿ ಮಳೆ ಸುರಿದಿತ್ತು. ಭಾರೀ ಮಳೆಗೆ ಪಾದಚಾರಿಗಳು, ವಾಹನ ಸವಾರರು ಸಮಸ್ಯೆಗೆ ಸಿಲುಕಿದರು. ಬೆಳ್ಳಂದೂರಿನ ಅಪಾರ್ಟ್ಮೆಂಟ್ನಲ್ಲಿ ಮಳೆ ಚರಂಡಿ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಸಂಚಾರ ದಟ್ಟಣೆ: ಬೆಂಗಳೂರು-ಮೈಸೂರು ಹೆದ್ದಾರಿಯ ಬಸವನಪುರದ ಬಳಿ ನೀರು ಭಾರೀ ಪ್ರಮಾಣದಲ್ಲಿ ನಿಂತ ಪರಿಣಾಮ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ, ವಾಹನಸವಾರರು ಪರದಾಡಿದರು.
ಅದರಲ್ಲೂ, ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ತುಂಬಿ ಹರಿಯುತ್ತಿದ್ದು, ಹೆದ್ದಾರಿಯಲ್ಲಿ ನೀರು ನಿಂತ ಹಿನ್ನಲೆ ಸುಮಾರು ೫ ಕಿಲೋ ಮೀಟರ್ ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ವೀಕೆಂಡ್ ಪರಿಣಾಮ ಭಾರೀ ಸಂಖ್ಯೆಯ ವಾಹನ ಸವಾರರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದರು. ಆದರೆ ದಿಢೀರ್ ಮಳೆ ಕಾರಣ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ.

ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ದ್ವಿಚಕ್ರವಾಹನ ಸವಾರರು ಮಳೆಯಲ್ಲೇ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾರೆ.
೧೦ಕ್ಕೂ ಹೆಚ್ಚು ಬೈಕ್ಗಳು ಜಖಂ..!
ಬಾರಿ ಮಳೆ ಗಾಳಿಗೆ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ಬೃಹತ್ ಗಾತ್ರದ ಮರ ಬಿದ್ದಿರುವ ಘಟನೆ ನಡೆದಿದೆ. ಪಾನಿಪುರಿ ಅಂಗಡಿ, ಬೈಕ್ ಗಳ ಮೇಲೆ ಮರ ಬಿದ್ದು, ೧೦ಕ್ಕೂ ಹೆಚ್ಚು ಬೈಕ್ ಗಳು ಜಖಂ ಆಗಿವೆ. ಬೃಹತ್ ಗಾತ್ರದ ಮರ ಬುಡ ಸಮೇತ ಧರೆಗುರುಳಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಸಾರ್ವಜನಿಕರು ಪಾರಾಗಿದ್ದಾರೆ.
ಕಾರಿನಲ್ಲಿ ಸಿಲುಕಿದ ಚಾಲಕ.!
ಪೀಣ್ಯಾದ ಅರವಿಂದ ಮೋಟಾರ್ಸ್ ಬಳಿ ಕಾರಿನ ಮೇಲೆ ಮರ ಬಿದ್ದಿದೆ. ಕಾರಿನಲ್ಲಿ ಸಿಲುಕಿದ ಚಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಬನ್ನೇರುಘಟ್ಟ ವೆಗಾ ಸಿಟಿ ಮಾಲ್ ಬಳಿಯೂ ಮರ ಬಿದ್ದಿದೆ. ಇದುವರೆಗೂ ಯಾವುದೇ ಪ್ರಾಣಾಪಾಯದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಕೆಲವೆಡೆ ರಸ್ತೆ ಬದಿ ನಿಂತ ವಾಹನ ಮಳೆ ನೀರಲ್ಲಿ ಕೊಚ್ಚಿ ಹೋಗಿವೆ ಎಂದು ವರದಿಯಾಗಿದೆ.
ಶತಮಾನದ ದಾಖಲೆ..!
ನಿನ್ನೆ ಸಂಜೆ ಬೆಂಗಳೂರು ಮಹಾಮಳೆಗೆ ಸಾಕ್ಷಿಯಾಗಿದೆ. ಇಡೀ ತಿಂಗಳ ವಾಡಿಕೆ ಮಳೆ ಒಂದೇ ಸಂಜೆ ಸುರಿದಿದ್ದು, ಹೊಸ ದಾಖಲೆ ಸೃಷ್ಟಿಯಾಗಿದೆ. ೧೩೩ ವರ್ಷಗಳ ಹಿಂದೆ ಸುರಿದಿದ್ದ ಮಳೆ ಪ್ರಮಾಣವನ್ನು ಮೀರಿಸಿ ಹೊಸ ದಾಖಲೆ ಬರೆದಿದೆ.
೧೮೯೧ರ ಜೂನ್ ೧೮ರಂದು ಬೆಂಗಳೂರಿನಲ್ಲಿ ೨೪ ಗಂಟೆಗಳಲ್ಲಿ ೧೦೧.೬ ಮಿ.ಮೀ ಮಳೆಯಾಗಿದ್ದು ಈವರೆಗಿನ ದಾಖಲೆಯಾಗಿತ್ತು, ಭಾನುವಾರ ಸುರಿದ ಮಳೆ ಆ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆಯಿತು.
ಬೆಂಗಳೂರಿನ ಹಂಪಿ ನಗರದಲ್ಲಿ ೧೦೧ ಮಿ.ಮೀ, ವಿದ್ಯಾಪೀಠ ೮೮ ಮಿ.ಮೀ, ಕಾಟನ್ಪೇಟೆ ೮೭ ಮಿ.ಮೀ, ಮಾರುತಿ ಮಂದಿರ ವಾರ್ಡ್ ೮೩ ಮಿ.ಮೀ, ಹೊರಮಾವು ೮೦ ಮಿ.ಮೀ, ಕೊಡಿಗೇಹಳ್ಳಿ ೭೯ ಮಿ.ಮೀ, ಕೊಟ್ಟಿಗೆಪಾಳ್ಯ ೭೭ ಮಿ.ಮೀ, ಸಂಪಂಗಿರಾಮನಗರ ೭೧ ಮಿ.ಮೀ, ಚಾಮರಾಜಪೇಟೆ ೭೧ ಮಿ.ಮೀ ಮಳೆಯಾಗಿದೆ.
ಮೆಟ್ರೊ ಸಂಚಾರ ಪುನಾರಂಭ..!?
ಮಳೆರಾಯನ ಅಬ್ಬರಕ್ಕೆ ಬೆಂಗಳೂರಿನ ಜೀವನಾಡಿಯಾಗಿರುವ ಮೆಟ್ರೊ ಸಂಚಾರಕ್ಕೂ ನಿನ್ನೆ ಅಡಚಣೆ ಉಂಟಾಯಿತ್ತು. ನೇರಳೆ ಲೈನ್ನ ಇಂದಿರಾನಗರ ಮತ್ತು ಎಂಜಿ ರಸ್ತೆಯ ನಡುವಿನ ಮೆಟ್ರೊ ಸೇತುವೆ ಮೇಲೆ ಮರವೊಂದು ಉರುಳಿ ಬಿತ್ತು. ಹೀಗಾಗಿ ಮೆಟ್ರೊ ಸಂಚಾರವನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು.
ಇದರಿಂದಾಗಿ ಬೆಂಗಳೂರಿನ ಹೃದಯ ಭಾಗವಾಗಿರುವ ಎಂಜಿ ರಸ್ತೆಯ ನಿಲ್ದಾಣದಲ್ಲಿ ಪ್ರಯಾಣಿಕ ಕಿಕ್ಕಿರಿದು ತುಂಬಿಕೊಂಡರು. ಒಂದು ಕಡೆ ಹೊರಗಡೆ ಸುರಿಯುತ್ತಿರುವ ಮಳೆ ಮತ್ತೊಂಡೆದೆ ರೈಲು ಸಂಚಾರ ಬಂದ್. ಹೀಗಾಗಿ ಜನರ ಎಲ್ಲಿಗೂ ಹೋಗಲು ಸಾಧ್ಯವಾಗದೇ ಪರಿತಪಿಸಿದರು. ಸೋಮವಾರ ಮತ್ತೆ ಸಂಚಾರ ಆರಂಭವಾಗಿದ್ದು, ಪೈಪ್ ಲೈನ್ ಬಳಿ ಪ್ರಯಾಣಿಕರು ಎಂದಿನಂತೆ ಸಂಚರಿಸಿದರು.
ಸಿಎಂ ಮನೆ ಮುಂದೆ ರಸ್ತೆ ಕುಸಿತ.!
ಸಿಎಂ ಸರ್ಕಾರಿ ನಿವಾಸದ ರಸ್ತೆಯಲ್ಲೇ ವಾರದ ಹಿಂದೆಯಷ್ಟೇ ತೇಪೆ ಹಾಕಲಾಗಿತ್ತು.ಅಷ್ಟರಲ್ಲೇ ನಿನ್ನೆ ಮಳೆಗೆ ರಸ್ತೆ ಕುಸಿತವಾಗಿದೆ.ವಾಹನ ಸವಾರರಿಗಂತೂ ದೊಡ್ಡ ಮಟ್ಟದ ಕಿರಿಕಿರಿ ಆಗಿದ್ದು, ಕುಸಿದ ರಸ್ತೆಯಲ್ಲಿ ವಾಹನಗಳಿಗೆ ಸಮಸ್ಯೆ ಆಗದಂತೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.
- ಬಸವೇಶ್ವರನಗರದಲ್ಲಿ ಮರದ ಕೊಂಬೆ ಬಿದ್ದು, ಪಾನಿಪುರಿ ಅಂಗಡಿಗೆ ಹಾನಿಯಾಗಿದೆ.
- ಜಯನಗರದಲ್ಲಿ ಮರದ ಕೊಂಬೆ ಬೀಳುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
*ಕೋರಮಂಗಲ ಬಳಿ ವಿದ್ಯುತ್ ಕಂಬ, ಆಟೋ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ. - ಗಿರಿನಗರದ ೧೩ನೇ ಕ್ರಾಸ್ನಲ್ಲಿ ಬೃಹತ್ ಗಾತ್ರದ ಮರ ಉರುಳಿಬಿದ್ದಿದ್ದರಿಂದ ಕಾರು ನಜ್ಜುಗುಜ್ಜಾಗಿದ್ವು. ಮರದಡಿ ಸಿಲುಕಿ ೨ ಬೈಕ್ಗಳು ಜಖಂ ಆಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
- ರಾಮಕೃಷ್ಣ ಆಶ್ರಮ ಬಳಿ ಬೃಹತ್ ಮರ ಬಿದ್ದು ಕಾರು ಜಖಂಗೊಂಡಿದೆ.
- ಗಾಂಧಿ ಬಜಾರ್ ಕೋಆಪರೇಟಿವ್ ಬ್ಯಾಂಕ್ ಬಳಿ ಮರಗಳು ಧರೆಗುರುಳಿವೆ.
- ತುಮಕೂರು ರಿಜಿಸ್ಟ್ರೇಷನ್ ಹೊಂದಿರುವ ಐ-೧೦ ಕಾರು ಜಖಂಗೊಂಡಿದೆ.
- ಮಳೆ ಆರ್ಭಟಕ್ಕೆ ಶಿವಾನಂದ ಸರ್ಕಲ್ನ ರೈಲ್ವೆ ಅಂಡರ್ ಪಾಸ್ನಲ್ಲಿ ಜಲಪಾತವೇ ಸೃಷ್ಟಿಯಾಗಿತ್ತು.
- ಕೆ.ಪಿ.ಅಗ್ರಹಾರದ ಕಲ್ಯಾಣಿ ರಸ್ತೆಯಲ್ಲಿ ೧೦ಕ್ಕೂ ಹೆಚ್ಚು ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದ್ದು, ನೀರು ಹೊರಹಾಕಲು ನಿವಾಸಿಗಳು ಪರದಾಡಿದರು.